ಸೀಕ್ರೆಟ್ ಸೂಪರ್‌ಸ್ಟಾರ್ (ಚಲನಚಿತ್ರ)

ಸೀಕ್ರೆಟ್ ಸೂಪರ್‌ಸ್ಟಾರ್ ೨೦೧೭ರ ಒಂದು ಹಿಂದಿ ಸಂಗೀತಮಯ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ಅದ್ವೈತ್ ಚಂದನ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣಶಾಲೆಯಡಿ ಆಮಿರ್ ಖಾನ್‌ ಮತ್ತು ಕಿರಣ್ ರಾವ್ ನಿರ್ಮಾಣ ಮಾಡಿದ್ದಾರೆ.[೧೦][೧೧][೧೨] ಈ ಚಿತ್ರದಲ್ಲಿ ಜ಼ಾಯರಾ ವಸೀಮ್, ಮೆಹೆರ್ ವಿಜ್, ರಾಜ್ ಅರ್ಜುನ್ ಮತ್ತು ಆಮಿರ್ ಖಾನ್ ನಟಿಸಿದ್ದಾರೆ.[೧೩] ಈ ಚಿತ್ರವು ಗಾಯಕಿಯಾಗಲು ಬಯಸಿ ನಿಕಾಬ್‍ನಿಂದ ತನ್ನ ಗುರುತನ್ನು ಮರೆಮಾಚಿ ಯೂಟ್ಯೂಬ್‌‍ನಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುವ, ಒಬ್ಬ ಹದಿಹರೆಯದ ಹುಡುಗಿ ಪ್ರೌಢತ್ವಕ್ಕೆ ಬರುವ ಮತ್ತು ತನ್ನ ತಾಯಿ, ತಂದೆ ಹಾಗೂ ಮಾರ್ಗದರ್ಶಿಯೊಂದಿಗೆ ಅವಳ ಸಂಬಂಧಗಳ ಕಥೆಯನ್ನು ಹೇಳುತ್ತದೆ.[೧೪] ಈ ಚಿತ್ರವು ಸ್ತ್ರೀ ಸಮಾನತಾವಾದ, ಲಿಂಗ ಸಮಾನತೆ ಮತ್ತು ಗೃಹ ಹಿಂಸಾಚಾರ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಕುರಿತಾಗಿದೆ.[೧೫][೧೬]

ಸೀಕ್ರೆಟ್ ಸೂಪರ್‌ಸ್ಟಾರ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಅದ್ವೈತ್ ಚಂದನ್
ನಿರ್ಮಾಪಕಆಮಿರ್ ಖಾನ್
ಕಿರನ್ ರಾವ್
ನಿತಿನ್ ಕೇಣಿ
ಆಕಾಶ್ ಚಾವ್ಲಾ
ಲೇಖಕಅದ್ವೈತ್ ಚಂದನ್
ಪಾತ್ರವರ್ಗಜ಼ಾಯರಾ ವಸೀಮ್
ಮೆಹೆರ್ ವಿಜ್
ರಾಜ್ ಅರ್ಜುನ್
ಆಮಿರ್ ಖಾನ್
ಸಂಗೀತಅಮಿತ್ ತ್ರಿವೇದಿ
ಛಾಯಾಗ್ರಹಣಅನಿಲ್ ಮೆಹ್ತಾ
ಸಂಕಲನಹೇಮಂತಿ ಸರ್ಕಾರ್
ಸ್ಟುಡಿಯೋಜ಼ೀ ಸ್ಟೂಡಿಯೋಸ್
ಆಮಿರ್ ಖಾನ್ ಪ್ರೊಡಕ್ಷನ್ಸ್
ವಿತರಕರುಜ಼ೀ ಸ್ಟೂಡಿಯೋಸ್
ಬಿಡುಗಡೆಯಾಗಿದ್ದು
  • 19 ಅಕ್ಟೋಬರ್ 2017 (2017-10-19)[೧]
ಅವಧಿ150 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಂಡವಾಳವಿವಾದಿತ[೨][೩][೪][೫][೬][೭][೮]
ಬಾಕ್ಸ್ ಆಫೀಸ್₹೯೭೭ ಕೋಟಿ[೯]

ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.[೧೭] ವಸೀಮ್ ಶ್ರೇಷ್ಠ ಸಾಧನೆಗಾಗಿ ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನು ಗೆದ್ದರು.[೧೮] ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸೀಕ್ರೆಟ್ ಸೂಪರ್‌ಸ್ಟಾರ್ ಅತ್ಯುತ್ತಮ ಚಲನಚಿತ್ರ, ಚಂದನ್‍ರಿಗೆ ಅತ್ಯುತ್ತಮ ನಿರ್ದೇಶಕ, ವಸೀಮ್‍ರಿಗೆ ಅತ್ಯುತ್ತಮ ನಟಿ ಮತ್ತು ಖಾನ್‍ರಿಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ಹತ್ತು ನಾಮನಿರ್ದೇಶನಗಳನ್ನು ಪಡೆಯಿತು. ಈ ಚಿತ್ರವು ವಸೀಮ್‍ರಿಗೆ ವಿಮರ್ಶಕರ ಅತ್ಯುತ್ತಮ ನಟಿ, ವಿಜ್‍ರಿಗೆ ಅತ್ಯುತ್ತಮ ಪೋಷಕ ನಟಿ ಮತ್ತು ಮೆಘನಾ ಮಿಶ್ರಾರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸೇರಿದಂತೆ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿತು.

ಸೀಕ್ರೆಟ್ ಸೂಪರ್‌ಸ್ಟಾರ್ ಸಾರ್ವಕಾಲಿಕವಾಗಿ ಅತ್ಯಂತ ಲಾಭದಾಯಕ ಚಲನಚಿತ್ರಗಳಲ್ಲಿ ಒಂದೆನಿಸಿಕೊಂಡಿತು,[೧೯][೨೦][೨೧][೨೨] ಮತ್ತು ವಿಶ್ವಾದ್ಯಂತ 965 ಕೋಟಿಯಷ್ಟು[೨೩] ಗಳಿಸಿತು.

ಕಥಾವಸ್ತು

೧೫ ವರ್ಷದ ಹುಡುಗಿಯಾದ ಇನ್ಸಿಯಾ ಮಲಿಕ್ ತನ್ನ ಗುಜರಾತಿ ಮುಸ್ಲಿಮ್ ಕುಟುಂಬದೊಂದಿಗೆ ವಡೋದರಾದಲ್ಲಿರುತ್ತಾಳೆ. ಅವಳ ಕುಟುಂಬದಲ್ಲಿ ಅವಳ ಅಮ್ಮ ನಜ್ಮಾ, ಅವಳ ತಮ್ಮ ಗುಡ್ಡು, ಅವಳ ಅಜ್ಜಿ, ಮತ್ತು ಹಲವುವೇಳೆ ತನ್ನ ಹೆಂಡತಿಗೆ ಹೊಡೆಯುವ ಮತ್ತು ಬೈಯುವ ಅವಳ ಅಪ್ಪ ಇರುತ್ತಾರೆ. ಇನ್ಸಿಯಾ ಗಾಯನದ ಬಗ್ಗೆ ಬಹಳ ಗಾಢವಾದ ಆಸಕ್ತಿಯನ್ನು ಹೊಂದಿರುತ್ತಾಳೆ. ಆದರೆ ಅವಳ ತಂದೆ ಗಾಯಕಿಯಾಗಬೇಕೆಂಬ ಅವಳ ಕನಸಿನ ವಿರುದ್ಧವಾಗಿರುತ್ತಾನೆ. ಅವನು ಕೆಲಸಕ್ಕಾಗಿ ಪಟ್ಟಣದಾಚೆಗೆ ಹೋಗುತ್ತಿದ್ದು ವಾರಕ್ಕೊಮ್ಮೆ ಮಾತ್ರ ಬರುತ್ತಿರುತ್ತಾನೆ.

ಇನ್ಸಿಯಾ ಒಂದು ಸಂಗಿತ ಸ್ಪರ್ಧೆಯಲ್ಲಿ ಭಾಗವಿಸಲಾಗುವುದಿಲ್ಲವಾದರೂ, ನಜ್ಮಾ ಅವಳಿಗೆ ಬಹುಮಾನವಾಗಿದ್ದ ಲ್ಯಾಪ್‍ಟಾಪ್‍ನ್ನು ಉಡುಗೊರೆಯಾಗಿ ಕೊಡುತ್ತಾಳೆ. ಫ಼ಾರೂಖ್ ತನ್ನ ಗುರುತನ್ನು ಪತ್ತೆಹಚ್ಚಲಾಗದಂತೆ ಅವಳು ನಿಕಾಬ್ ಧರಿಸಿ ಒಂದು ಹಾಡನ್ನು ಮುದ್ರಿಸಿ ಅದರ ವೀಡಿಯೊವನ್ನು ಯೂಟ್ಯೂಬ್‍ನಲ್ಲಿ 'ಸೀಕ್ರೆಟ್ ಸೂಪರ್‌ಸ್ಟಾರ್' ಹೆಸರಿನಡಿ ಅಪ್ಲೋಡ್ ಮಾಡುತ್ತಾಳೆ. ಅವಳು ರಾತ್ರೋರಾತ್ರಿ ತೀವ್ರಾಸಕ್ತಿಯನ್ನು ಮೂಡಿಸಿ ಮುಂಬೈನಲ್ಲಿ ನೆಲೆಸಿರುವ ಪ್ರತಿಭಾವಂತ ಆದರೆ ಆಡಂಬರದ ಸಂಗೀತ ನಿರ್ದೇಶಕ ಶಕ್ತಿ ಕುಮಾರ್‌ನ ಗಮನವನ್ನು ಸೆಳೆಯುತ್ತಾಳೆ. ಒಂದು ಹಾಡನ್ನು ಮುದ್ರಿಸುವಂತೆ ಅವನು ಇನ್ಸಿಯಾಳನ್ನು ವಿನಂತಿಸಿಕೊಳ್ಳುತ್ತಾನೆ. ಆದರೆ ಅವನ ಬಗ್ಗೆ ಬಹಳಷ್ಟು ನಕಾರಾತ್ಮಕ ವಿಮರ್ಶೆಗಳನ್ನು ಕೇಳಿ ಅವಳು ನಿರಾಕರಿಸುತ್ತಾಳೆ. ಒಂದು ದಿನ, ಅವಳು ಅವಳ ಬಗ್ಗೆ ಒಂದು ಸುದ್ದಿಪತ್ರಿಕೆ ಲೇಖನವನ್ನು ಓದಲು ತನ್ನ ಟ್ಯೂಶನ್ ಪರೀಕ್ಷೆಯನ್ನು ಬಿಡುತ್ತಾಳೆ. ಅವಳ ಛಾವಣಿಯ ಮೇಲೆ, ಅವಳ ಮೇಲೆ ವ್ಯಾಮೋಹ ಹೊಂದಿರುವ ಅವಳ ಗೆಳೆಯ ಚಿಂತನ್ ಇನ್ಸಿಯಾಳೇ ಸೀಕ್ರೆಟ್ ಸೂಪರ್‌ಸ್ಟಾರ್ ಎಂದು ತನಗೆ ಗೊತ್ತಿದೆ ಎಂದು ಬಹಿರಂಗಪಡಿಸುತ್ತಾನೆ. ಅವನು ತನ್ನ ಪ್ರೀತಿಯನ್ನು ಅವಳೆದುರು ಒಪ್ಪಿಕೊಂಡಾಗ ಅವಳ ಮುಖ ನಾಚಿಕೆಯಿಂದ ಕೆಂಪೇರಿ ಅವನನ್ನು ತಿರಸ್ಕರಿಸುತ್ತಾಳೆ. ಅವಳ ಕಳಪೆ ಪರೀಕ್ಷಾ ಅಂಕಗಳ ಕಾರಣ ಫ಼ಾರೂಖ್ ಅವಳ ಗಿಟಾರ್‌ನ್ನು ಮುರಿಯುತ್ತಾನೆ.

ಮುಂದಿನ ರಾತ್ರಿಯಂದು, ಇನ್ಸಿಯಾಳ ಲ್ಯಾಪ್‍ಟಾಪ್‍ನ್ನು ಖರೀದಿಸಲು ನಜ್ಮಾ ತನ್ನ ಕಂಠಹಾರವನ್ನು ಮಾರಿದ್ದು ಗೊತ್ತಾಗಿ, ಫ಼ಾರೂಖ್ ಅವಳಿಗೆ ಬಿರುಸಾಗಿ ಹೊಡೆದು ಲ್ಯಾಪ್‍ಟಾಪ್‍ನ್ನು ಹೊರಗೆ ಎಸೆಯುವಂತೆ ಇನ್ಸಿಯಾಳಿಗೆ ಹೇಳುತ್ತಾನೆ. ಇನ್ಸಿಯಾ ಬಹಳ ಕೋಪಗೊಂಡು ಲ್ಯಾಪ್‌ಟಾಪ್‍ನ್ನು ಒರಟಾಗಿ ಕಿತ್ತುಕೊಂಡು ಬಾಲ್ಕನಿಯಿಂದ ಕೆಳಗೆಸೆದಾಗ ಅದು ಬಿದ್ದು ರಸ್ತೆಯ ಮೇಲೆ ಛಿದ್ರಗೊಳ್ಳುತ್ತದೆ. ಆಘಾತಗೊಂಡು, ನಜ್ಮಾ ಅದನ್ನು ನೋಡುತ್ತಾಳೆ. ಶಕ್ತಿ ಕುಮಾರ್ ವಿರುದ್ಧ ಒಂದು ವಿಚ್ಛೇದನ ಪ್ರಕರಣವನ್ನು ಗೆದ್ದ ಒಬ್ಬ ಪ್ರಸಿದ್ಧ ವಕೀಲೆಯನ್ನು ನೋಡಿದ ಮೇಲೆ, ತನ್ನ ಹೆತ್ತವರ ವಿಚ್ಛೇದನ ಮಾಡಿಸಲು ಇನ್ಸಿಯಾ ಶಕ್ತಿಗಾಗಿ ಹಾಡುವ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ನಿರ್ಧರಿಸುತ್ತಾಳೆ. ಇನ್ಸಿಯಾ ಶಕ್ತಿಯ ಸಂಪರ್ಕ ಸಾಧಿಸಿ ಒಂದು ಹಾಡನ್ನು ಮುದ್ರಿಸಲು ಮುಂಬೈಗೆ ಹೋಗುತ್ತಾಳೆ. ಚಿಂತನ್‍ನ ನೆರವಿನಿಂದ ಶಾಲೆಯಿಂದ ತಪ್ಪಿಸಿಕೊಳ್ಳುವಾಗ, ಅವಳು ಅವನಿಗಾಗಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಮುಂಬೈಯಲ್ಲಿ, ಪಾರ್ಟಿ ಹಾಡನ್ನು ಹಾಡಲು ಅವಳಿಗೆ ಸಾಧ್ಯವಾಗುವುದಿಲ್ಲ, ಏಕೆಂದರೆ ಅವಳಿಗೆ ಆ ಹಾಡು ಎಂದೂ ಬಿಡುಗಡೆಯಾಗದ ಮತ್ತೊಂದರ ರೀಮಿಕ್ಸ್‌ನಂತೆನಿಸುತ್ತದೆ. ಅವನು ಅವಳಿಗಾಗಿ ಮೂಲವಾಗಿ ಬರೆದ ತನ್ನ ಹಾಡನ್ನು ಹಾಡುತ್ತಾನೆ. ಇನ್ಸಿಯಾ ಹಾಡಿನ ಮೂಲ ಆವೃತ್ತಿಯನ್ನು ಮುದ್ರಿಸುತ್ತಾಳೆ ಮತ್ತು ಅವಳು ಅತ್ಯುತ್ತಮ ಗಾಯಕಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡು ಅವಳ ಖ್ಯಾತಿ ಹೆಚ್ಚಾಗುತ್ತದೆ.

ಶಕ್ತಿ ತನ್ನ ಮಾಜಿ ಹೆಂಡತಿಯ ವಕೀಲೆಯೊಂದಿಗೆ ಮನಸ್ಸಿಲ್ಲದೆ ಅವಳ ಭೇಟಿಯನ್ನು ಗೊತ್ತುಮಾಡಿದಾಗ ಅವಳು ಸಹಿಗಳಿಗಾಗಿ ಇನ್ಸಿಯಾಳಿಗೆ ಕೆಲವು ಕಡತಗಳನ್ನು ನೀಡುತ್ತಾಳೆ. ಮನೆಗೆ ಬಂದಾಗ, ಅವಳ ತಾಯಿಯು ವಿಚ್ಛೇದನದ ಇನ್ಸಿಯಾಳ ಪ್ರಸ್ತಾಪವನ್ನು ಕಠಿಣವಾಗಿ ನಿರಾಕರಿಸುತ್ತಾಳೆ ಏಕೆಂದರೆ ಹಾಗಾದರೆ ಅವರಿಗೆ ಯಾವುದೇ ಹಣಕಾಸಿನ ಆಧಾರವಿರುವುದಿಲ್ಲ. ಇನ್ಸಿಯಾ ಕೋಪಗೊಳ್ಳುತ್ತಾಳೆ, ಆದರೆ ಅವಳನ್ನು ಗರ್ಭಪಾತಮಾಡಿಸಲು ಫ಼ಾರೂಖ್‍ನ ಪ್ರಯತ್ನಗಳ ಹೊರತಾಗಿಯೂ ಇನ್ಸಿಯಾಳನ್ನು ಜೀವಂತವಾಗಿಡಲು ನಜ್ಮಾ ಹೇಗೆ ಕಷ್ಟಪಟ್ಟಳು ಎಂಬುದನ್ನು ಅವಳ ಅಜ್ಜಿ ಬಹಿರಂಗಪಡಿಸಿದಾಗ ಆಮೇಲೆ ಅಮ್ಮನನ್ನು ಕ್ಷಮಿಸುತ್ತಾಳೆ. ಅವನಿಗೆ ರಿಯಾಧ್‍ನಲ್ಲಿ ಉತ್ತಮವಾದ ಕೆಲಸ ಸಿಕ್ಕಿದೆಯೆಂದು ಫ಼ಾರೂಖ್ ಹೇಳುತ್ತಾನೆ. ಫ಼ಾರೂಖ್ ಇಡೀ ಕುಟುಂಬವನ್ನು ತನ್ನೊಂದಿಗೆ ಕರೆದೊಯ್ಯುತ್ತಿದ್ದು ಮತ್ತು ಇನ್ಸಿಯಾ ತನ್ನ ಗೆಳೆಯನ ಮಗನನ್ನೂ ಮದುವೆಯಾಗುವಳು ಎಂದು ತಿಳಿದು ಅವಳಿಗೆ ನಿರಾಸೆಯಾಗುತ್ತದೆ. ತೀವ್ರಾಘಾತವಾಗಿ, ಅವಳು ಹಾಡುವ ಭರವಸೆಯನ್ನು ಬಿಟ್ಟು ತನ್ನ ಯೂಟ್ಯೂಬ್ ಚ್ಯಾನ್‍ಲ್‍ನ್ನು ಅಳಿಸುತ್ತಾಳೆ. ಅವನು ತಮ್ಮ ನಿರ್ಗಮನವನ್ನು ಇನ್ಸಿಯಾಳ ಪರೀಕ್ಷೆಗಳ ಕೊನೆಯ ದಿನದಂದು ದೃಢಪಡಿಸುತ್ತಾನೆ.

ಶಾಲೆಯ ಅಂತಿಮ ದಿನದಂದು, ಇನ್ಸಿಯಾ ಮತ್ತು ಚಿಂತನ್ ಸಂತೋಷದ ತಮ್ಮ ಕೊನೆಯ ಕ್ಷಣಗಳನ್ನು ಒಟ್ಟಾಗಿ ಕಳೆಯುತ್ತಾರೆ. ವಿಮಾನ ನಿಲ್ದಾಣದಲ್ಲಿ, ಮುಂಗಟ್ಟೆಯ ಗುಮಾಸ್ತನು ಫಾರೂಖ್‍ಗೆ ಗಿಟಾರ್ ಇರುವ ಹೆಚ್ಚುವರಿ ಚೀಲದ ಬಗ್ಗೆ ಹೇಳುತ್ತಾನೆ. ಫ಼ಾರೂಖ್ ನಜ್ಮಾಗೆ ಬೈದಾಗ ಅವಳು ಪ್ರತಿಭಟಿಸುತ್ತಾಳೆ. ಅವಳು ಸಿಟ್ಟಿನಿಂದ ವಿಚ್ಛೇದನದ ದಾಖಲೆ ಪತ್ರಗಳಿಗೆ ಸಹಿಹಾಕಿ ಫ಼ಾರೂಖ್‍ನನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ವಿಮಾನ ನಿಲ್ದಾಣದಿಂದ ಹೊರಹೋಗುತ್ತಾಳೆ. ಮೂವರೂ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗುತ್ತಾರೆ. ಅಲ್ಲಿ ಇನ್ಸಿಯಾ ಅತ್ಯುತ್ತಮ ಗಾಯಕಿ ಪ್ರಶಸ್ತಿಗೆ ನಾಮನಿರ್ದೇಶನ ಪಡೆದಿರುತ್ತಾಳೆ. ದುರದೃಷ್ಟವಶಾತ್, ಸೀಕ್ರೆಟ್ ಸೂಪರ್‌ಸ್ಟಾರ್ ಪ್ರಶಸ್ತಿಯನ್ನು ಗೆಲ್ಲುವುದಿಲ್ಲ. ಆದರೆ ವಿಜೇತೆಯಾದ ಮೊನಾಲಿ ಠಾಕುರ್ ಪ್ರಶಸ್ತಿಯನ್ನು ಅವಳ ಕೈಗೊಪ್ಪಿಸಿದಾಗ ಅವಳು ವೇದಿಕೆ ಬರುತ್ತಾಳೆ. ಇನ್ಸಿಯಾ ತನ್ನ ಗುರುತನ್ನು ಎಲ್ಲರ ಮುಂದೆ ಬಹಿರಂಗಪಡಿಸಿ ತನ್ನ ಪ್ರಶಸ್ತಿಯನ್ನು ನಜ್ಮಾಳಿಗೆ ಸಮರ್ಪಿಸಿ ಅವಳೆ ನಿಜವಾದ 'ಸೀಕ್ರೆಟ್ ಸೂಪರ್‌ಸ್ಟಾರ್' ಎಂದು ಭಾವಿಸುತ್ತಾಳೆ ಏಕೆಂದರೆ ಅವಳು ಯಾವಾಗಲೂ ಇನ್ಸಿಯಾಳಿಗೆ ಬೆಂಬಲ ನೀಡಿ ಅವಳಿಗಾಗಿ ಹೋರಾಡಿರುತ್ತಾಳೆ. ಅವಳು ಧ್ವನಿವರ್ಧಕವನ್ನು ಕೆಳಬಿಟ್ಟು ನಜ್ಮಾಳನ್ನು ಆಲಿಂಗಿಸುತ್ತಾಳೆ.

ಪರದೆಯು ಮಸುಕಾಗಿ ಚಿತ್ರವನ್ನು "ತಾಯಂದಿರರಿಗೆ ಮತ್ತು ಮಾತೃತ್ವಕ್ಕೆ" ಸಮರ್ಪಿಸುವ ಸಂದೇಶ ಕಾಣಿಸುತ್ತದೆ. ನಂತರ, ಶಕ್ತಿ ಇನ್ಸಿಯಾಳಿಗೆ ಸಮರ್ಪಿತವಾದ ತನ್ನ ಪಾರ್ಟಿ ಹಾಡನ್ನು ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡುತ್ತಾನೆ.

ಪಾತ್ರವರ್ಗ

  • ಇನ್ಸಿಯಾ ಮಲಿಕ್ ಪಾತ್ರದಲ್ಲಿ ಜ಼ಾಯರಾ ವಸೀಮ್
  • ನಜ್ಮಾ ಮಲಿಕ್ ಪಾತ್ರದಲ್ಲಿ ಮೆಹೆರ್ ವಿಜ್[೨೪]
  • ಫ಼ಾರೂಖ್ ಮಲಿಕ್ ಪಾತ್ರದಲ್ಲಿ ರಾಜ್ ಅರ್ಜುನ್[೨೫]
  • ಸಂಗೀತ ನಿರ್ದೇಶಕ ಶಕ್ತಿ ಕುಮಾರ್ ಪಾತ್ರದಲ್ಲಿ ಆಮಿರ್ ಖಾನ್
  • ಚಿಂತನ್ ಪಾರೇಖ್ ಪಾತ್ರದಲ್ಲಿ ತೀರ್ಥ್ ಶರ್ಮಾ
  • ಗುಡ್ಡು ಮಲಿಕ್ ಪಾತ್ರದಲ್ಲಿ ಕಬೀರ್ ಸಾಜಿದ್
  • ಬಡಿ ಆಪಾ ಪಾತ್ರದಲ್ಲಿ ಫ಼ಾರೂಖ್ ಜಾಫ಼ರ್
  • ಶೀನಾ ಸಾಬಾವಾಲಾ ಪಾತ್ರದಲ್ಲಿ ಮೋನಾ ಅಂಬೇಗಾಂವ್ಕರ್
  • ಮುದ್ರಣಕಾರ ಅಲಿ ಪಾತ್ರದಲ್ಲಿ ಶಮತ್ ಮಜ಼ೂಮ್‍ದಾರ್
  • ರಂಜೀತ್ ಕುಮಾರ್ ಪಾತ್ರದಲ್ಲಿ ಮನುಜ್ ಶರ್ಮಾ
  • ಪಾಠದ ಶಿಕ್ಷಕಿಯಾಗಿ ನಿಕಿತಾ ಆನಂದ್ ಮುಖರ್ಜಿ
  • ಇನ್ಸಿಯಾಳ ಮಿತ್ರನಾಗಿ ಹರ್ಷ್ ಝಾ
  • ಶಿಕ್ಷಕಿಯಾಗಿ ಸಲೋನಿ ಮೆಹ್ತಾ
  • ಸ್ವಪಾತ್ರದಲ್ಲಿ ಶಾನ್
  • ಸ್ವಪಾತ್ರದಲ್ಲಿ ಮೊನಾಲಿ ಠಾಕುರ್

ತಯಾರಿಕೆ

ಬೆಳವಣಿಗೆ

ಆಮಿರ್ ಖಾನ್‍ರ ದೂರದರ್ಶನ ಟಾಕ್ ಶೋ ಸತ್ಯಮೇವ ಜಯತೇಯ ಮೊದಲ ಋತುವಿನ ಅವಧಿಯಲ್ಲಿ ಚಂದನ್ ಈ ಚಲನಚಿತ್ರವನ್ನು ಪರಿಕಲ್ಪಿಸಿದರು. ಮನೆ ಹಿಂಸಾಚಾರದ ಬಗೆಗಿನ ಸಂಚಿಕೆಯ ಮೇಲೆ ಸಂಶೋಧನೆ ಮಾಡುವಾಗ ಅದ್ವೈತ್ ಚಂದನ್‍ಗೆ ಶನ್ನೊ ಎಂಬ ಒಂಟಿ ತಾಯಿ ಮತ್ತು ಮನೆ ಹಿಂಸಾಚಾರಕ್ಕೆ ತುತ್ತಾದವಳ ಪರಿಚಯವಾಗಿ ಅವಳ ಜೀವನದ ಕಥೆ ತಿಳಿಯಿತು. ಆ ಕಥೆಯು ಅದ್ವೈತ್ ಚಂದನ್‍ರಿಗೆ ನಾಯಕ ಎಂಬ ಪದವನ್ನು ಮರುವ್ಯಾಖ್ಯಾನಿಸಿತು.

ಸತ್ಯಮೇವ ಜಯತೆಯ ಮೂರನೇ ಋತುವಿನ ಅವಧಿಯಲ್ಲಿನ ಮೊದಲ ಸಂಚಿಕೆಯು ಭಾರತದ ಅತಿ ಕಿರಿಯ ಗಾಲ್ಫ್ ಚಾಂಪಿಯನ್ ಮತ್ತು ಗೌಳಿಗ ಮಗನಾದ ಹತ್ತು ವರ್ಷದ ಶುಭಂ ಜಗ್ಲಾನ್ ಎಂಬುವನ ಬಗ್ಗೆ ಆಗಿತ್ತು. ಶುಭಮ್‍ನ ಕಥೆಯು ಅದ್ವೈತ್ ಚಂದನ್‍ರಿಗೆ ತಮ್ಮ ಚಿತ್ರ ಸೀಕ್ರೆಟ್ ಸೂಪರ್‌ಸ್ಟಾರ್‌ನ ಬೆಳವಣಿಗೆಯಲ್ಲಿ ನೆರವಾಯಿತು.

ಆಮಿರ್ ಖಾನ್ ತಮ್ಮ ವ್ಯವಸ್ಥಾಪಕ ಅದ್ವೈತ್ ಚಂದನ್ ಮತ್ತು ಸಂಗೀತ ಸಂಯೋಜಕ ಎ. ಆರ್. ರೆಹಮಾನ್ ಸಹಯೋಗದಲ್ಲಿ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ಜುಲೈ ೨೦೧೫ರಲ್ಲಿ ವರದಿಯಾಯಿತು.[೨೬][೨೭] ಎಪ್ರಿಲ್ ೨೦೧೬ರಲ್ಲಿ, ಚಿತ್ರದ ಶೀರ್ಷಿಕೆ ಸೀಕ್ರೆಟ್ ಸೂಪರ್‌ಸ್ಟಾರ್ ಎಂದು ಹೇಳಲಾಯಿತು. ಆಮೇಲ್ ರೆಹಮಾನ್ ವೇಳಾಪಟ್ಟಿ ಸಂಘರ್ಷಗಳ ಕಾರಣ ಚಿತ್ರದಿಂದ ಹೊರಬಂದರು. ಅವರ ಬದಲು ಅಮಿತ್ ತ್ರಿವೇದಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಪಾತ್ರ ಹಂಚಿಕೆ ಮತ್ತು ಚಿತ್ರೀಕರಣ

ದಂಗಲ್ (೨೦೧೬) ಚಿತ್ರದಲ್ಲಿ ಆಮಿರ್ ಖಾನ್ ಜ಼ಾಯರಾ ವಸೀಮ್‍ರೊಂದಿಗೆ ಕೆಲಸಮಾಡಿದ್ದರು. ಅದರ ನಂತರ ಸ್ವಲ್ಪ ಸಮಯದ ಬಳಿಕ, ತಮ್ಮ ಚಿತ್ರ ಸೀಕ್ರೆಟ್ ಸೂಪರ್‌ಸ್ಟಾರ್‍ನ ಮುಖ್ಯ ಪಾತ್ರಕ್ಕೆ ಅದೇ ವಯಸ್ಸಿನ ಹುಡುಗಿಯನ್ನು ಹುಡುಕುತ್ತಿರುವುದಾಗಿ ಅದ್ವೈತ್ ಖಾನ್‍ಗೆ ಹೇಳಿದರು. ಖಾನ್ ವಸೀಮ್‍ರ ಹೆಸರನ್ನು ಸೂಚಿಸಿದರು. ಅವರನ್ನು ಪರೀಕ್ಷಿಸಿದ ಬಳಿಕ ಅದ್ವೈತ್ ಪ್ರಭಾವಿತರಾಗಿ ಮುಖ್ಯ ಪಾತ್ರವನ್ನು ಅವರಿಗೆ ಹಂಚಿದರು.[೨೮]

ಚಿತ್ರದ ಪ್ರಧಾನ ಛಾಯಾಗ್ರಹಣವು ೧ ಸೆಪ್ಟೆಂಬರ್ ೨೦೧೬ರಂದು ಆರಂಭವಾಯಿತು. ಚಿತ್ರೀಕರಣವು ವಡೋದರಾ ಮತ್ತು ಮುಂಬೈಯಲ್ಲಿ ನಡೆಯಿತು.[೨೯]

ಚಿತ್ರವನ್ನು ಸೀಮಿತ ಬಂಡವಾಳದಿಂದ ನಿರ್ಮಾಣ ಮಾಡಲಾಯಿತು. ನಿರ್ಮಾಣದ ಅಂದಾಜು ₹15 ಕೋಟಿಯಾಗಿತ್ತು ಎಂದು ಹೆಚ್ಚಿನ ಮೂಲಗಳು ಹೇಳುತ್ತವೆ.

ಬಿಡುಗಡೆ

ಭಾರತ

ಸೀಕ್ರೆಟ್ ಸೂಪರ್‌ಸ್ಟಾರ್ ಭಾರತದಲ್ಲಿ ೧೯ ಅಕ್ಟೋಬರ್ ೨೦೧೭ರಂದು ಬಿಡುಗಡೆಯಾಯಿತು.[೩೦] ಈ ಚಿತ್ರವನ್ನು ದೂರದರ್ಶನದಲ್ಲಿ ಮೊದಲ ಬಾರಿಗೆ ಜ಼ೀ ಸಿನಿಮಾ ವಾಹಿನಿಯಲ್ಲಿ 24–5 ಫ಼ೆಬ್ರುವರಿ 2018 ರಂದು ಪ್ರದರ್ಶಿಸಲಾಯಿತು.[೩೧]

ವಿದೇಶದಲ್ಲಿ

ಈ ಚಿತ್ರವು ತೈವಾನ್‍ನಲ್ಲಿ 24 ನವೆಂಬರ್ 2017ರಂದು ಬಿಡುಗಡೆಯಾಯಿತು. ರಷ್ಯಾದಲ್ಲಿ ಈ ಚಿತ್ರವು 8 ಫ಼ೆಬ್ರುವರಿ 2018ರಂದು ಬಿಡುಗಡೆಯಾಯಿತು.[೩೨][೩೩] ಫಿಲಿಪೈನ್ಸ್‌ನ ಚಿತ್ರಮಂದಿರಗಳಲ್ಲಿ ಈ ಚಿತ್ರವು 31 ಮಾರ್ಚ್ 2018 ರಂದು ಬಿಡುಗಡೆಯಾಯಿತು.[೩೪] ಜಪಾನ್‍ನಲ್ಲಿ ಈ ಚಿತ್ರವು 9 ಆಗಸ್ಟ್ 2019ರಂದು ಬಿಡುಗಡೆಯಾಯಿತು.[೩೫]

ಚೈನಾ

ಈ ಚಿತ್ರವು ಚೈನಾದಲ್ಲಿ 19 ಜನೆವರಿ 2018ರಂದು ಬಿಡುಗಡೆಯಾಯಿತು.[೩೬][೩೭] ಇದು ಆದಾಯ ಹಂಚಿಕೆ ಒಪ್ಪಂದವನ್ನು ಹೊಂದಿದ್ದ ಮೊದಲ ಭಾರತೀಯ ಚಲನಚಿತ್ರವಾಗಿತ್ತು.

ಹಾಂಗ್ ಕಾಂಗ್

ಹಾಂಗ್ ಕಾಂಗ್‍ನಲ್ಲಿ ಈ ಚಿತ್ರವು 12 ಎಪ್ರಿಲ್ 2018ರಂದು ಬಿಡುಗಡೆಯಾಯಿತು.[೩೮]

ಸಂಗೀತ

ಚಿತ್ರದ ಸಂಗೀತವನ್ನು ಅಮಿತ್ ತ್ರಿವೇದಿ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಕೌಸರ್ ಮುನೀರ್ ಬರೆದಿದ್ದಾರೆ. ಧ್ವನಿಸಂಗ್ರಹದಲ್ಲಿ ಎಂಟು ಹಾಡುಗಳಿಗೆ. ಐದು ಹಾಡುಗಳನ್ನು ಮೇಘನಾ ಮಿಶ್ರಾ ಹಾಡಿದ್ದಾರೆ ಮತ್ತು ಮೀಕಾ ಸಿಂಗ್, ಸುನಿಧಿ ಚೌಹಾನ್ ಹಾಗೂ ಕುಶಾಲ್ ಚೋಕ್ಸಿ ಒಂದೊಂದು ಹಾಡನ್ನು ಹಾಡಿದ್ದಾರೆ. ಸಂಪೂರ್ಣ ಧ್ವನಿವಾಹಿನಿ ಸಂಗ್ರಹವನ್ನು 21 ಸಪ್ಟಂಬರ್ 2017 ರಂದು ಬಿಡುಗಡೆ ಮಾಡಲಾಯಿತು.

ಆರಂಭದಲ್ಲಿ, ಚಿತ್ರಕ್ಕೆ ಸಂಗೀತ ಸಂಯೋಜಿಸುವ ಪ್ರಸ್ತಾಪದೊಂದಿಗೆ ಆಮಿರ್ ಖಾನ್ ಎ. ಆರ್. ರೆಹಮಾನ್ ಬಳಿ ಹೋದರು. ಗೀತಸಾಹಿತಿಯಾಗಿ ಪ್ರಸೂನ್ ಜೋಶಿಯವರನ್ನು ಗೊತ್ತುಮಾಡಲಾಗಿತ್ತು. ಆದರೆ ಒಮ್ಮೆ ನಿರ್ಮಾಣ ವಿಳಂಬಗೊಂಡ ಮೇಲೆ, ರೆಹಮಾನ್ ಮತ್ತು ಪ್ರಸೂನ್ ಜೋಶಿ ವೇಳಾಪಟ್ಟಿ ಸಂಘರ್ಷಗಳ ಕಾರಣ ಹೇಳಿ ಯೋಜನೆಯಿಂದ ಹೊರಬಂದರು.[೩೯]

ಎಲ್ಲ ಹಾಡುಗಳು ಕೌಸರ್ ಮುನೀರ್ ಅವರಿಂದ ರಚಿತ; ಎಲ್ಲ ಸಂಗೀತ ಅಮಿತ್ ತ್ರಿವೇದಿ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಗಾಯಕ(ರು)ಸಮಯ
1."ಮೇ ಹ್ಞೂ ಕೌನ್"ಮೇಘನಾ ಮಿಶ್ರಾ03:45
2."ಮೇರಿ ಪ್ಯಾರಿ ಅಮ್ಮಿ"ಮೇಘನಾ ಮಿಶ್ರಾ05:28
3."ಸಪನೇ ರೇ"ಮೇಘನಾ ಮಿಶ್ರಾ04:10
4."ಆಯ್ಲ್ ಮಿಸ್ ಯೂ"ಕುಶಾಲ್ ಚೋಕ್ಷಿ05:12
5."ನಚದಿ ಫಿರಾ"ಮೇಘನಾ ಮಿಶ್ರಾ04:15
6."ಸೆಕ್ಸಿ ಬಲಿಯೆ"ಮೀಕಾ ಸಿಂಗ್03:13
7."ಗುದ್ಗುದಿ"ಸುನಿಧಿ ಚೌಹಾನ್04:12
8."ಓ ರೇ ಮನ್ವಾ"ಮೇಘನಾ ಮಿಶ್ರಾ03:40
ಒಟ್ಟು ಸಮಯ:33:55

ಬಾಕ್ಸ್ ಆಫ಼ಿಸ್

ಅದರ ಸೀಮಿತ ಬಂಡವಾಳಕ್ಕೆ ಹೋಲಿಸಿದರೆ, ಸೀಕ್ರೆಟ್ ಸೂಪರ್‌ಸ್ಟಾರ್ ಸಾರ್ವಕಾಲಿಕವಾಗಿ ಅತ್ಯಂತ ಲಾಭಗಳಿಸಿದ ಚಲನಚಿತ್ರಗಳಲ್ಲಿ ಒಂದೆನಿಸಿಕೊಂಡಿತು.[೪][೪೦][೪೧][೪೨]

ಇದು ೨೦೧೭ರಲ್ಲಿ ಅತಿ ಹೆಚ್ಚು ಹಣಗಳಿಸಿದ ಹಿಂದಿ ಚಲನಚಿತ್ರವಾಗಿದೆ.

ಭಾರತ

28 ಜನೆವರಿ 2018ರ ವೇಳೆಗೆ, ಈ ಚಿತ್ರದ ದೇಶೀಯ ಗಳಿಕೆ ₹90 ಕೋಟಿಯಷ್ಟಾಗಿತ್ತು.

ವಿಮರ್ಶಾತ್ಮಕ ಪ್ರತಿಕ್ರಿಯೆ

ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ರಾಷ್ಟ್ರೀಯ ಬಾಲ ಪ್ರಶಸ್ತಿಗಳು

  • ಅಸಾಧಾರಣ ಸಾಧನೆ - ಜ಼ಾಯರಾ ವಸೀಮ್ - ಗೆಲುವು

ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
  • ಅತ್ಯುತ್ತಮ ನಿರ್ದೇಶಕ - ಅದ್ವೈತ್ ಚಂದನ್ - ನಾಮನಿರ್ದೇಶಿತ
  • ಅತ್ಯುತ್ತಮ ಚಿತ್ರಕಥೆ - ಅದ್ವೈತ್ ಚಂದನ್ - ನಾಮನಿರ್ದೇಶಿತ
  • ಅತ್ಯುತ್ತಮ ನಟಿ - ಜ಼ಾಯರಾ ವಸೀಮ್ - ನಾಮನಿರ್ದೇಶಿತ
  • ವಿಮರ್ಶಕರ ಅತ್ಯುತ್ತಮ ನಟಿ - ಜ಼ಾಯರಾ ವಸೀಮ್ - ಗೆಲುವು
  • ಅತ್ಯುತ್ತಮ ಪೋಷಕ ನಟ - ಆಮಿರ್ ಖಾನ್ - ನಾಮನಿರ್ದೇಶಿತ
  • ಅತ್ಯುತ್ತಮ ಪೋಷಕ ನಟಿ - ಮೆಹೆರ್ ವಿಜ್ - ಗೆಲುವು
  • ಅತ್ಯುತ್ತಮ ಹಿನ್ನೆಲೆ ಗಾಯಕಿ - ಮೇಘನಾ ಮಿಶ್ರಾ ("ನಚ್‍ದಿ ಫಿರಾ" ಹಾಡಿಗಾಗಿ) - ಗೆಲುವು
  • ಅತ್ಯುತ್ತಮ ಸಂಗೀತ ನಿರ್ದೇಶಕ - ಅಮಿತ್ ತ್ರಿವೇದಿ - ನಾಮನಿರ್ದೇಶಿತ
  • ಅತ್ಯುತ್ತಮ ಗೀತಸಾಹಿತಿ - ಕೌಸರ್ ಮುನೀರ್ ("ನಚ್‍ದಿ ಫಿರಾ" ಹಾಡಿಗಾಗಿ) - ನಾಮನಿರ್ದೇಶಿತ

ಪ್ರಭಾವ

ಸ್ತ್ರೀ ಸಮಾನತಾವಾದ ಮತ್ತು ಮನೆ ಹಿಂಸಾಚಾರದಂತಹ ಸೀಕ್ರೆಟ್ ಸೂಪರ್‌ಸ್ಟಾರ್ ಚಿತ್ರದ ಸಾಮಾಜಿಕ ವಿಷಯಗಳು ಚೈನಾದ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ ವಿಶ್ವವ್ಯಾಪಿ ಸಮಸ್ಯೆಗಳಾಗಿದ್ದವು.[೪೩] ಅನೇಕರು ಚಿತ್ರದ ವಿಷಯಗಳಿಗೆ ಸಂಬಂಧಿಸಬಲ್ಲರಾಗಿದ್ದರು.[೪೪] ವರದಿಗಳ ಪ್ರಕಾರ, ಸೀಕ್ರೆಟ್ ಸೂಪರ್‌ಸ್ಟಾರ್ ಚೈನಾದ ಮಹಿಳೆಯರು ಮನೆ ಹಿಂಸಾಚಾರದ ಸಂಬಂಧವಾಗಿ ಪೋಲಿಸರಿಗೆ ಕರೆಮಾಡುವುದರಲ್ಲಿ ಹೆಚ್ಚಳವಾಗುವುದರ ಮೇಲೆ ಪ್ರಭಾವ ಬೀರಿದೆ.[೪೫]

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ