ಭ್ರಮಾಧೀನ ವ್ಯಕ್ತಿತ್ವ

ಭ್ರಮಾಧೀನ ವ್ಯಕ್ತಿತ್ವ ಇದೊಂದು ಸ್ವಭಾವ ಅಥವಾ ವ್ಯಕ್ತಿತ್ವದ ಲಕ್ಷಣವಾಗಿದ್ದು, ಇದರಲ್ಲಿ ವ್ಯಕ್ತಿಯು ಆಜೀವಪರ್ಯಂತ  ವಿಸ್ತಾರವಾದ ಮತ್ತು ಆಳವಾದ ಕಲ್ಪನಾಲೋಕದಲ್ಲಿ ಮುಳುಗಿರುತ್ತಾನೆ.[೧] ಈ ನಿಲುವು ಅತಿಯಾದ ಕಲ್ಪನೆ ಅಥವಾ ಭ್ರಮಾಲೋಕ/ ಕನಸಿನ ಲೋಕದಲ್ಲಿ ವಾಸಿಸುವುದನ್ನು ಉತ್ತಮವಾಗಿ ವಿವರಿಸುವ ಪ್ರಯತ್ನವಾಗಿದೆ. ಇಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯು ವಾಸ್ತವಿಕತೆ ಮತ್ತು ಕಲ್ಪನೆಯನ್ನು ಬೇರ್ಪಡಿಸಿ ಅರ್ಥೈಸಲು ಕಷ್ಟವಾಗುತ್ತದೆ/ ಅಸಾಧ್ಯವೆನಿಸುತ್ತದೆ; ಹಾಗೆಯೇ ಆ ವ್ಯಕ್ತಿ ಭ್ರಮೆಗೊಳಗಾಗುತ್ತಾನೆ ಮತ್ತು ಸ್ವಯಂ ಸೂಚಿತ ಮನೋದೈಹಿಕ ಲಕ್ಷಣಗಳನ್ನು ತೋರುತ್ತಾನೆ. ಇದಕ್ಕೆ ಸಂವಾದಿಯಾದ ಮನಶಾಸ್ತ್ರೀಯ ಸ್ಥಿತಿಗಳು - ಹಗಲುಗನಸು, ಅಂತರ್ಗತ, ಮತ್ತು ಸುಸ್ಪಷ್ಟ ನೆನಪಿನ ಸಾಮರ್ಥ್ಯ.

ಇತಿಹಾಸ

ಅಮೇರಿಕನ್ ಮನಃಶಾಸ್ತ್ರಜ್ಞರಾದ ಶೆರಿಲ್ ಸಿ ವಿಲ್ಸನ್ ಮತ್ತು ಥಿಯೋಡರ್ ಎಕ್ಸ್ ಬಾರ್ಬರ್ ೧೯೮೧ರಲ್ಲಿ ಮೊದಲ ಬಾರಿಗೆ ಭ್ರಮಾಧೀನ ವ್ಯಕ್ತಿತ್ವವನ್ನು ಗುರುತಿಸಿದರು; ಹಾಗೂ ಇದು ೪% ಜನಸಂಖ್ಯೆಗೆ ಅನ್ವಯಿಸುತ್ತದೆ ಎಂದು ಹೇಳಿದರು. ಈ ಗುಣಲಕ್ಷಣವನ್ನು ಗುರುತಿಸುವುದರ ಜೊತೆಗೆ, ವಿಲ್ಸನ್ ಮತ್ತು ಬಾರ್ಬರ್  ಭ್ರಮಾಧೀನ ವ್ಯಕ್ತಿತ್ವವುಳ್ಳ ಅನೇಕ ಜನರ  ಬಾಲ್ಯದ ಜೀವನವನ್ನು ಅಧ್ಯಯಿಸಿದ್ದಾರೆ ಮತ್ತು ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಆ ವ್ಯಕ್ತಿಗಳ ನಂತರದ ಜೀವನದಲ್ಲಿ ಕಲ್ಪನಾಲೋಕಕ್ಕೆ ಅಡಿಪಾಯವನ್ನು ಹಾಕಿತು ಎಂದಿದ್ದಾರೆ, ಉದಾಹರಣೆಗೆ, "ಪೋಷಕರು, ಅಜ್ಜ-ಅಜ್ಜಿ, ಶಿಕ್ಷಕರು ಅಥವಾ ಸ್ನೇಹಿತರು ಕಾಲ್ಪನಿಕ ಕಥೆಗಳನ್ನು ಓದಲು ಪ್ರೋತ್ಸಾಹಿದ್ದು, ಮಗುವಿನ ಕಲ್ಪನಾಶಕ್ತಿಯನ್ನು ಬಲವಾಗುವಂತೆ ಮಾಡಿತು; ಹಾಗೂ ಇದು ಮನುಷ್ಯ/ಪ್ರಾಣಿಗಳ ಗೊಂಬೆಗಳನ್ನು ಜೀವಂತವಾದವುಗಳು" ಎಂದು ನಂಬುವಂತೆ ಮಾಡಿತು. ಈ ರೀತಿಯ ಸ್ವಭಾವಗಳು ಸಂಮೋಹನಕ್ಕೆ ಸುಲಭವಾಗಿ ಸ್ಪಂದಿಸುವ ಮನಸ್ಥಿತಿಗೆ ಸಮಾನವಾಗಿ ಇದೆಯೆಂದು ಅವರ ಇಂಗಿತ. ೧೯೮೦ರಲ್ಲಿ ಮನಃಶಾಸ್ತ್ರಜ್ಞರಾದ ಜುಡಿತ್ ರೂ ಮತ್ತು ಸ್ಟೀವನ್ ಜೇ ಲಿನ್ ಭ್ರಮಾಧೀನ ವ್ಯಕ್ತಿತ್ವದ ಬಗೆಗೆ ಮೊದಲ ವ್ಯವಸ್ಥಿತ ಅಧ್ಯಯನಗಳನ್ನು ಮಾಡಿದರು. ೧೯೯೦ ರ ದಶಕದಲ್ಲಿ ಹಾರ್ವರ್ಡ್ನಲ್ಲಿ ಡೀರ್ಡ್ರೆ ಬ್ಯಾರೆಟ್ ನಡೆಸಿದ ಸಂಶೋಧನೆಯು ಭ್ರಮಾಧೀನ ಜನರ ಈ ಗುಣಲಕ್ಷಣಗಳನ್ನು ಧೃಢೀಕರಿಸಿತು; ಹಾಗೂ ಅತಿಯಾಗಿ ಸಂಮೋಹನಕ್ಕೊಳಗಾಗಬಲ್ಲ ಜನರು ಅಂದರೆ ಯಾರು ಆಘಾತಕಾರಿ ಬಾಲ್ಯವನ್ನು ಹೊಂದಿದ್ದರೋ, ಕಲ್ಪನಾಲೋಕದಲ್ಲಿ ಹೆಚ್ಚು ಸಮಯವನ್ನು ಕಳೆದಿದ್ದರೋ ಅವರ ಇನ್ನೊಂದು ಗುಂಪನ್ನು ಸಹ ಅವರು ಗುರುತಿಸಿದರು.

ವಿಶಿಷ್ಟ ಲಕ್ಷಣಗಳು

ಭ್ರಮಾಧೀನ ವ್ಯಕ್ತಿತ್ವವುಳ್ಳ ಜನರು ತಮ್ಮ ಸಮಯದ  ಅರ್ಧ ಅಥವಾ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಹಗಲುಗನಸಿನಲ್ಲಿಯೇ ಕಳೆಯುತ್ತಾರೆ. ಹಾಗೂ ವಾಸ್ತವಿಕತೆ ಮತ್ತು ಕಲ್ಪನೆಗಳ ನಡುವಿನ ವ್ಯತ್ಯಾಸಗಳನ್ನು ಅರಿಯದೇ ದ್ವಂದ್ವದಲ್ಲಿ ಸಿಲುಕಿ, ಎರಡೂ ನೆನಪುಗಳನ್ನು ಬೆರೆಸುತ್ತಾರೆ. ತಾವು ದೇಹದಿಂದ ಹೊರ ಬಂದಂತೆ, ಕೆಲವು ಅತೀಂದ್ರಿಯ (ಪ್ಯಾರಸೈಕೋಲಾಜಿಕಲ್) ಎಂದು ವ್ಯಾಖ್ಯಾನಿಸುವ ಅನುಭವಗಳನ್ನು ಹೇಳುತ್ತಾರೆ.

ಪ್ಯಾರಾಕೋಸ್ಮ್ ಎನ್ನುವುದು ಅತ್ಯಂತ ವಿವರವಾದ ಮತ್ತು ರಚನಾತ್ಮಕ ಭ್ರಮಾತ್ಮಕ/ಕಲ್ಪನಾ ಜಗತ್ತು, ಇದನ್ನು ಹೆಚ್ಚಾಗಿ ತೀವ್ರ ಕಲ್ಪನಾನಿರತರು ರಚಿಸುತ್ತಾರೆ.

ವಿಲ್ಸನ್ ಮತ್ತು ಬಾರ್ಬರ್ ತಮ್ಮ ಪ್ರವರ್ತಕ ಅಧ್ಯಯನದಲ್ಲಿ ಭ್ರಮಾಧೀನ ವ್ಯಕ್ತಿತ್ವವುಳ್ಳ ಜನರ ಹಲವಾರು ಗುಣಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ, ಹಾಗೂ ಈ ಗುಣಲಕ್ಷಣಗಳನ್ನು ನಂತರದ ಅಧ್ಯಯನಗಳಲ್ಲಿ ವರ್ಧಿಸಿ, ಸ್ಪಷ್ಟಪಡಿಸಲಾಗಿದೆ.[೨] [೩] ಭ್ರಮಾಧೀನ ವ್ಯಕ್ತಿತ್ವದ ಗುಣಲಕ್ಷಣಗಳು ಈ ಕೆಳಗಿನ ಕೆಲವು ಅಥವಾ ಹಲವು ಅನುಭವಗಳನ್ನು ಒಳಗೊಂಡಿವೆ:

  • ಅತಿಯಾಗಿ ಸಂಮೋಹನಕ್ಕೊಳಗಾಗುವುದು.
  • ಬಾಲ್ಯದಲ್ಲಿ ಕಲ್ಪನಾ ಸ್ನೇಹಿತರನ್ನು ಒಳಗೊಂಡಿರುವುದು.
  • ಮಕ್ಕಳಂತೆ ಭ್ರಮಾಧೀನವಾಗಿ ವರ್ತಿಸುವುದು.
  • ನಿಜವಾದ ಕಲ್ಪನಾ ಗುರುತನ್ನು ಹೊಂದಿರುವುದು.
  • ಕಲ್ಪಿತ ಸಂವೇದನೆಗಳನ್ನು ನೈಜವೆಂದು ಪರಿಗಣಿಸುವುದು.
  • ಬಲವಾದ ಸಂವೇದನಾ ಗ್ರಹಿಕೆಗಳನ್ನು ಹೊಂದಿರುವುದು.
  • ದೈಹಿಕ ಪ್ರಚೋದನೆಯಿಲ್ಲದೆ ಲೈಂಗಿಕ ತೃಪ್ತಿಯನ್ನು ಪಡೆಯುವುದು.

ಕಲ್ಪನೆಗಳ ಸ್ಪಷ್ಟತೆಗಳನ್ನು ಬಾಲ್ಯದ ನೆನಪುಗಳು ಮತ್ತು ಕಲ್ಪನೆಗಳ ಪಟ್ಟಿ (ಐಸಿಎಂಐ-ಇನ್ವೆಂಟರಿ ಆಫ್ ಚೈಲ್ಡ್ ಹುಡ್ ಮೆಮೊರಿಸ್ ಆಂಡ್ ಇಮಾಜಿನಿಂಗ್ಸ್ )[೪] ಹಾಗೂ ಸೃಜನಶೀಲ ಅನುಭವಗಳ ಪ್ರಶ್ನಾವಳಿ (ಸಿಇಕ್ಯೂ- ಕ್ರಿಯೇಟಿವ್ ಎಕ್ಸ್ಪೀರಿಯೆನ್ಸಸ್ ಕ್ವಶ್ಚನೇರ್) ಯಿಂದ ಅಳೆಯಲಾಗುತ್ತದೆ.[೫]

ಬೆಳವಣಿಗೆಯ ಹಾದಿಗಳು

ಭ್ರಮಾನಿರತರು/ಕಲ್ಪನಾನಿರತರು ತಮ್ಮ ಬಾಲ್ಯದಲ್ಲಿ ಕಲ್ಪನಾಲೋಕದೆಡೆಗೆ ಹೆಚ್ಚು ತೆರೆದಿರುತ್ತಾರೆ.[೧] [೨] ಬಾಲ್ಯದಲ್ಲಿ ಅತಿಯಾದ ಕಲ್ಪನಾನಿರತತೆಗೆ  ಮುಖ್ಯವಾಗಿ ಮೂರು ಕಾರಣಗಳಿರಬಹುದು:

೧. ಮಗು ಬಾಲ್ಯದಲ್ಲಿ ಆಟವಾಡುವಾಗ ತನ್ನ ಹೆತ್ತವರು/ಪೋಷಕರು ತನ್ನೊಂದಿಗೆ ಆಟವಾಡುತ್ತಿದ್ದಾರೆ ಎಂದು ತನ್ನ ಕಲ್ಪನಾಲೋಕದಲ್ಲಿ  ಭ್ರಮಿಸಿ ಆಟವಾಡುವುದು.

ಭ್ರಮಾಧೀನ ವ್ಯಕ್ತಿತ್ವವುಳ್ಳ ಜನರು ಹೆಚ್ಚಾಗಿ ತಮ್ಮ ಬಾಲ್ಯದಲ್ಲಿ ಹೆತ್ತವರು/ಪೋಷಕರು, ಹತ್ತಿರದ ಸಂಬಂಧಿಗಳು, ಅಥವಾ ತನ್ನ ಸ್ನೇಹಿತರು ಆಟಿಕೆಗಳು ಜೀವವಿರುವ ವಸ್ತುಗಳೆಂದು ಹೇಳಿದ್ದನ್ನು ಬಲವಾಗಿ ನಂಬಿರಬಹುದು. ಆ ಆಟಿಕೆಗಳನ್ನು ತಮ್ಮ ನಿಕಟವರ್ತಿಗಳಿಗೆ ಹೋಲಿಸಿ ಆಡಿದ್ದಿರಬಹುದು. ಅಥವಾ ಹೆತ್ತವರು ಕಾಲ್ಪನಿಕ ಕಥೆಗಳನ್ನು ಓದಲು ಪ್ರೋತ್ಸಾಹಿಸಿದ್ದಿರಬಹುದು. ಅತೀ ಚಿಕ್ಕ ವಯಸ್ಸಿನಲ್ಲಿಯೇ ಕಲ್ಪನಾನಿರತ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿಗಳು ಭ್ರಮಾಧೀನ ವ್ಯಕ್ತಿತ್ವವನ್ನು ಹೆಚ್ಚಾಗಿ ಹೊಂದುತ್ತಾರೆ. ನಟನೆಯೂ ಕೂಡಾ ಮಕ್ಕಳಿಗೆ ತಮ್ಮನ್ನು ತಾವು ಬೇರೆ ಬೇರೆ ಜನರ, ವಿವಿಧ ಪಾತ್ರಗಳಲ್ಲಿ ಗುರುತಿಸಿ, ಕಾಲ್ಪನಿಕ ಕಥೆಗಳನ್ನು ಸತ್ಯವೆಂದು ತಿಳಿಯಬಹುದು.

[ ಉಲ್ಲೇಖದ ಅಗತ್ಯವಿದೆ ]ಎಷ್ಟೋ ವರದಿಗಳಲ್ಲಿ ಭ್ರಮಾಧೀನ ವ್ಯಕ್ತಿಗಳು ತಾವು ಬಾಲ್ಯದಲ್ಲಿರುವಾಗ ಗೊಂಬೆಗಳನ್ನು, ಆಟಿಕೆಗಳನ್ನು ಜೀವಂತವೆಂದು ನಂಬಿದ್ದಾಗಿ, ಹಾಗೂ ಅವರ ಪೋಷಕರು ಪ್ರೋತ್ಸಾಹಿಸಿದ್ದಲ್ಲದೇ, ಆಟದಲ್ಲಿ ಕಲ್ಪನೆ, ಹಗಲುಕನಸುಗಳಿಗೆ ಉತ್ತೇಜನ ನೀಡಿದ್ದರು ಎಂದು ಹೇಳಿದ್ದಾರೆ. [೫] [೬]

೨.ದೈಹಿಕ, ಮಾನಸಿಕ ಹಿಂಸೆ, ಅತ್ಯಾಚಾರ ಮುಂತಾದವುಗಳ ನೆನಪುಗಳಿಂದ ತಪ್ಪಿಸಿಗೊಳ್ಳಲು ಕಲ್ಪನೆಯು ದಾರಿಯಾಗುತ್ತದೆ.

೩. ಅತಿಯಾದ ಒಂಟಿತನ, ಹಾಗೂ ಬೇರ್ಪಡುವಿಕೆಯಿಂದಾದ ಬೇಸರದಿಂದ ತಪ್ಪಿಸಿಕೊಳ್ಳಲು ಕಲ್ಪನಾಲೋಕವು ಸಹಾಯಮಾಡುತ್ತದೆ.

ಮನೋವಿಶ್ಲೇಷಣಾತ್ಮಕ ವ್ಯಾಖ್ಯಾನಗಳಿಗೆ ಸಂಬಂಧಿಸಿದಂತೆ, ಅತ್ರೃಪ್ತ ಬಯಕೆಗಳು ಈ ಕಲ್ಪನೆಗಳು ಹಾಗೂ ಭ್ರಮಾನಿರತ ಸ್ಥಿತಿಗಳಿಗೆ ಪ್ರೇರಕ ಶಕ್ತಿಯಾಗಿದೆ.  ಏಕೆಂದರೆ ಪ್ರತಿಯೊಂದು ಕಲ್ಪನೆಯೂ ಬಯಕೆಯನ್ನು ಪೂರೈಸುತ್ತದೆ ಮತ್ತು ಅತೃಪ್ತಿಕರ ವಾಸ್ತವಿಕತೆಯನ್ನು ಮರೆಸುತ್ತದೆ. ಬಾಲ್ಯದಲ್ಲಾದ ಆಘಾತಕಾರಿ ಘಟನೆಗಳು, ಹಿಂಸೆ, ಒಂಟಿತನ ಇವೆಲ್ಲವೂ ಕಹಿ ಘಟನೆಗಳನ್ನು ಮರೆತು ಖುಷಿಯಿಂದಿರಲು ಕಲ್ಪನಾಲೋಕವನ್ನು ಅವಲಂಬಿಸುತ್ತಾರೆ. [೧]

ಪರಸ್ಪರ ಸಂಬಂಧಿ ಸ್ಥಿತಿಗಳು

ಮಾನವನ ವ್ಯಕ್ತಿತ್ವವನ್ನು ವಿವರಿಸುವ ಐದು ಅಂಶಗಳ ಮಾದರಿಯಲ್ಲಿ ಅನುಭವಗಳ ಪ್ರತಿಯಾಗಿ ಪೂರಕತೆ ಕೂಡಾ ಒಂದು. ಮುಕ್ತತೆಯು  ಸಕ್ರಿಯವಾದ ಕಲ್ಪನೆ, ಸೌಂದರ್ಯದ ಸೂಕ್ಷ್ಮತೆ, ಆಂತರಿಕ ಭಾವನೆಗಳೆಡೆಗೆ ಗಮನ, ವೈವಿಧ್ಯತೆಗೆ ಆದ್ಯತೆ ಮತ್ತು ಬೌಧ್ದಿಕ ಕುತೂಹಲದೊಂದಿಗೆ ಆರು ಆಯಾಮಗಳನ್ನು ಒಳಗೊಂಡಿದೆ. ಆದ್ದರಿಂದ ಭ್ರಮಾಧೀನ ವ್ಯಕ್ತಿತ್ವವು ಅನುಭವಗಳ ಪ್ರತಿಯಾಗಿ ಪೂರಕತೆ ಒಂದು   ಆಯಾಮವಾದ ಕಲ್ಪನೆ/ಭ್ರಮೆಯೊಂದಿಗೆ ಸಂಬಂಧವನ್ನು ಹೊಂದಿದೆ.

ಅಂತರ್ಗತ - ಇದು ಒಂದು ವ್ಯಕ್ತಿತ್ವದ ಲಕ್ಷಣವಾಗಿದೆ. ಇದರಲ್ಲಿ ವ್ಯಕ್ತಿಯು ತನ್ನ ಮಾನಸಿಕ ಚಿತ್ರಣದಲ್ಲಿ, ವಿಶೇಷವಾಗಿ ತನ್ನ ಕಲ್ಪನಾಲೋಕದಲ್ಲಿ ವಿಲೀನನಾಗುತ್ತಾನೆ.[೭] ಅಂತರ್ಗತನ ಬಗೆಗಿನ ಮೂಲಸಂಶೋಧನೆಯನ್ನು ಅಮೇರಿಕಾದ ಮನಃಶಾಸ್ತ್ರಜ್ಞ ಔಕ್ ಟೆಲ್ಲೆಜೆನ್ ಮಾಡಿದ್ದಾರೆ.[೮] ರೋಚೆ ಎಂಬುವವರು ಕಲ್ಪನೆ ಮತ್ತು ಅಂತರ್ಗತ ಎರಡೂ ಒಂದಕ್ಕೊಂದು ಸಂಬಂಧಸಿವೆ ಎಂದು ಹೇಳಿದ್ದಾರೆ. ಕಲ್ಪನಾನಿರತ ವ್ಯಕ್ತಿಗಳು ತಮ್ಮ ಪ್ರಜ್ವಲ ಮತ್ತು  ವಾಸ್ತವಿಕ ಮಾನಸಿಕ ಚಿತ್ರಣದಲ್ಲಿ ಲೀನರಾಗುತ್ತಾರೆ.

ವಿಘಟನೆಯು ವೈಯಕ್ತಿಕ ಗುರುತು ಅಥವಾ ಸ್ವಯಂ ಪ್ರಜ್ಞೆಯಲ್ಲಿ ಬದಲಾವಣೆಗಳನ್ನು ಒಳಗೊಂಡ ಮಾನಸಿಕ ಪ್ರಕ್ರಿಯೆಯಾಗಿದೆ. ಈ ಮಾರ್ಪಾಡುಗಳು ಈ ಮುಂದಿನವುಗಳನ್ನು ಒಳಗೊಂಡಿದೆ: ಸ್ವಯಂ ಅಥವಾ ಪ್ರಪಂಚವು ಅವಾಸ್ತವವಾಗಿದೆ ಎಂಬ ಭಾವನೆ (ಅಪನಗದೀಕರಣ ಮತ್ತು ವ್ಯತಿರಿಕ್ತೀಕರಣ); ಮರೆವು (ವಿಸ್ಮೃತಿ); ತನ್ನ ಗುರುತನ್ನು ಮರೆತುಬಿಡುವುದು ಅಥವಾ ಹೊಸದಾಗಿ ಗ್ರಹಿಸುವುದು (ಫ್ಯೂಗ್); ಮತ್ತು ತನ್ನ ಗುರುತು ಅಥವಾ ಸ್ವಯಂ ಅನ್ನು ಪ್ರತ್ಯೇಕ ಪ್ರಜ್ಞೆಯ ವಿಭಜನೆಗಳಾಗಿ ವಿಭಜಿಸುವುದು (ವಿಘಟಿತ ಗುರುತಿನ ಅಸ್ವಸ್ಥತೆ, ಇದನ್ನು ಮೊದಲು ಬಹು ವ್ಯಕ್ತಿತ್ವ ಅಸ್ವಸ್ಥತೆ ಎಂದು ಕರೆಯಲಾಗುತ್ತಿದ್ದರು). ವಿಘಟನೆಯನ್ನು ಹೆಚ್ಚಾಗಿ ವಿಘಟಿತ ಅನುಭವಗಳ ಮಾಪನದಿಂದ ಅಳೆಯಲಾಗುತ್ತದೆ. ವಿಘಟನೆ ಮತ್ತು ಕಲ್ಪನೆಯು ಪರಸ್ಪರ ಸಂಬಂಧ ಹೊಂದಿದೆ ಎಂದು ಹಲವಾರು ಅಧ್ಯಯನಗಳು ವರದಿ ಮಾಡಿವೆ ಹಾಗೂ ಬಹು ವ್ಯಕ್ತಿತ್ವ ಅಸ್ವಸ್ಥತೆ ಇರುವವರು ಆಘಾತದಿಂದ ಹೊರಬರಲು ಕಲ್ಪನೆಯ ಹಾದಿಯನ್ನು ಅನುಸರಿಸುವ ಸಾಧ್ಯತೆಗಳಿವೆ ಎಂದು ಹೇಳಿದೆ.

ವಿಘಟನೆಯು ಪ್ರಾಥಮಿಕವಾಗಿ ಮತ್ತು ನೇರವಾಗಿ ಆಘಾತಕ್ಕೆ ಒಳಗಾಗುವುದರಿಂದ ಉಂಟಾಗುತ್ತದೆ ಮತ್ತು ಕಲ್ಪನೆಯು ಕೂಡಾ ವಿಘಟನೆಗೆ ಕಾರಣವಾಗಿದೆ ಎಂದು ಸಾಕ್ಷ್ಯಗಳ ಸುದೀರ್ಘ ಪರಿಶೀಲನೆಯಿಂದ ತಿಳಿಯಲಾಗಿದೆ.[೯]

ಆರೋಗ್ಯದ ಮೇಲಿನ ಪರಿಣಾಮಗಳು

ಸುಳ್ಳು ಗರ್ಭಧಾರಣೆ (ಸೂಡೊಸೈಸಿಸ್) -   ಹೆಚ್ಚಿನ ಸಂಖ್ಯೆಯ ಸ್ತ್ರೀ ಕಲ್ಪನಾನಿರತರು/ಭ್ರಮಾಧೀನರು ಇದನ್ನು ಹೊಂದಿದ್ದಾರೆ. ವಿಲ್ಸನ್-ಬಾರ್ಬರ್ ಅಧ್ಯಯನದಲ್ಲಿ ಪ್ರಶ್ನೆಗೊಳಪಟ್ಟವರಲ್ಲಿ  ೬೦% ಭ್ರಮಾಧೀನ ಸ್ತ್ರೀಯರು ಒಮ್ಮೆಯಾದರೂ ಸುಳ್ಳು ಗರ್ಭಧಾರಣೆಯನ್ನು (ಸೂಡೊಸೈಸಿಸ್) ಹೊಂದಿದ್ದಾರೆಂದು ಹೇಳಿದ್ದಾರೆ. ವರದಿಯ ಪ್ರಕಾರ  ಸೂಡೊಸೈಸಿಸ್ ಹೊಂದಿರುವವರು ತಾವು ಗರ್ಭಿಣಿ ಎಂದು ನಂಬಿದ್ದರು ಮತ್ತು ಅವರು ಗರ್ಭಿಣಿಯ ಲಕ್ಷಣಗಳನ್ನು ಹೊಂದಿದ್ದರು.  ಅಮೆನೋರಿಯಾ (ಮುಟ್ಟಿನ ನಿಲುಗಡೆ)ದ ಜೊತೆಗೆ, ಸ್ತನದಲ್ಲಿ ಬದಲಾವಣೆಗಳು, ಕಿಬ್ಬೊಟ್ಟೆಯ ಹಿಗ್ಗುವಿಕೆ, ಬೆಳಿಗ್ಗೆ ಕಾಯಿಲೆ, ಕಡುಬಯಕೆಗಳು ಮತ್ತು "ಭ್ರೂಣದ" ಚಲನೆಗಳು ಇತ್ಯಾದಿಗಳಲ್ಲಿ ಕನಿಷ್ಟ ನಾಲ್ಕು ಲಕ್ಷಣಗಳನ್ನು ಅನುಭವಿಸಿದ್ದಾರೆ: ಅವರಲ್ಲಿಬ್ಬರು ಗರ್ಭಪಾತಕ್ಕೂ ಹೋಗಿದ್ದರು, ಆಗ ಯಾವುದೇ ಭ್ರೂಣ ಕಂಡುಬಂದಿಲ್ಲ ಎಂದು ಅವರಿಗೆ ವೈದ್ಯರು ತಿಳಿಸಿದ್ದರು. ಗರ್ಭಧಾರಣೆಯ ಪರೀಕ್ಷೆಗಲ್ಲಿ ನಕಾರಾತ್ಮಕ ಫಲಿತಾಂಶಗಳನ್ನು ಪಡೆದಾಗ, ಮಗುವನ್ನು ಪಡೆಯುವ ತೀವ್ರವಾದ ಇಚ್ಛೆಯಿದ್ದರೂ ಮಗು ಆಗದಿದ್ದಾಗ ಸುಳ್ಳು ಗರ್ಭಧಾರಣೆ (ಸೂಡೊಸೈಸಿಸ್)ಯ ಪ್ರಕರಣಗಳು ಹೆಚ್ಚುತ್ತವೆ.

ಹೊಂದಾಣಿಕೆಯಿಲ್ಲದ ಹಗಲುಗನಸು- ಇದು ಪ್ರಸ್ತಾವಿತ ಮಾನಸಿಕ ಅಸ್ವಸ್ಥತೆಯಾಗಿದೆ,  ದೈನಂದಿನ ಜೀವನದಲ್ಲಿ ವ್ಯಕ್ತಿಗಳ ನಡುವಿನ ಪರಸ್ಪರ ಕ್ರಿಯೆಯನ್ನು ಬದಲಿಸುವ ಹಾಗೂ ಕೆಲಸ, ಸಂಬಂಧಗಳು ಮತ್ತು ಸಾಮಾನ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಉಂಟು ಮಾಡುವ ಕಲ್ಪನೆಗಳನ್ನೊಳಗೊಂಡ ಚಟುವಟಿಕೆಯಾಗಿದೆ. ಈ ಲಕ್ಷಣವನ್ನೊಳಗೊಂಡಿರುವ ವ್ಯಕ್ತಿಗಳು ಕಲ್ಪನೆಯಲ್ಲಿ ತಮಗೆ ಬೇಕಾದಂತೆ, ತಮ್ಮ ಇಚ್ಛೆಗನುಸಾರವಾಗಿ ಸನ್ನಿವೇಶಗಳನ್ನು ಮತ್ತು ಪಾತ್ರಗಳನ್ನು ಸೃಷ್ಟಿಸುತ್ತಾರೆ. ಅತಿಯಾದ ಹಗಲುಗನಸಿನಿಂದ ಬಳಲುತ್ತಿರುವ ಜನರು ತಮ್ಮ ಕಲ್ಪನೆಗಳ ಸನ್ನಿವೇಶಗಳು ಮತ್ತು ಪಾತ್ರಗಳು ನೈಜವಾಗಿಲ್ಲ ಮತ್ತು ವಾಸ್ತವವಾದದ್ದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಈ ಲಕ್ಷಣ ಅವರನ್ನು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವವರಿಂದ ಪ್ರತ್ಯೇಕಿಸುವ ಅಂಶವಾಗಿದೆ.[೧೦]

೨೦೧೧ರಲ್ಲಿ  ೯೦ ಮಂದಿ ವಿಪರೀತ, ಕಂಪಲ್ಸಿವ್ ಅಥವಾ ಅಸಮರ್ಪಕ ಕಲ್ಪನಾನಿರತರು ಯಾರು ತಮ್ಮನ್ನು ತಾವು ಹೆಚ್ಚು ರಚನಾತ್ಮಕ, ತಲ್ಲೀನಗೊಳಿಸುವ ಕಾಲ್ಪನಿಕ ಅನುಭವಗಳಲ್ಲಿ ವ್ಯಾಪಕ ಅವಧಿಗಳಲ್ಲಿ ತೊಡಗಿಸಿಕೊಂಡಿದ್ದಾರೋ ಅವರ ಬಗೆಗೆ  ಅಧ್ಯಯಿಸಿ ವರದಿ ಮಾಡಿದೆ. ಅವರು ಆಗಾಗ್ಗೆ ಮೂರು ಅಂಶಗಳಿಂದ ಉಂಟಾಗುವ ತೊಂದರೆಯನ್ನು ವರದಿ ಮಾಡಿದ್ದಾರೆ:

  1. ಅಗಾಧವಾಗಿ ಕಾಣುವ ಅವರ ಕಲ್ಪನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ/ಕಷ್ಟವಾಗುವುದು.
  2. ಅತಿಯಾದ ಕಲ್ಪನೆಗಳು ತಮ್ಮ ನಿತ್ಯಜೀವನದ ಚಟುವಟಿಕೆಗಳಿಗೆ, ವೈಯಕ್ತಿಕ ಸಂಬಂಧಗಳನ್ನು ನಿಭಾಯಿಸುವಲ್ಲಿ ಅಡಚಣೆಯಾಗಿ ಕಾಡುವುದು.
  3. ಈ "ಅಸಹಜ" ನಡವಳಿಕೆಯ ಕಾರಣದಿಂದಾಗಿ ಇತರರಿಂದ ಅವಮಾನಿತರಾಗದಿರಲು ಹಾಗೂ ಎಲ್ಲರಿಂದ ಮರೆಮಾಡಲು ಅತಿಯಾದ ಪ್ರಯತ್ನಗಳನ್ನು ಮಾಡಬೇಕಾಗಿಬರುವುದು. [೧೧]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ