ಬಿ.ವಿ. ರಾಧಾ

ಬಿ.ವಿ.ರಾಧಾ(ಅಗಸ್ಟ್ ೧೯೪೮ - ೧೦ ಸೆಪ್ಟೆಂಬರ್ ೨೦೧೭) ಕನ್ನಡದ ಹೆಸರಾಂತ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ಕಲಾವಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಯ ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಧಾ ನಟಿಯಾಗಿ ಅಪಾರ ಜನಪ್ರಿಯತೆ ಪಡೆದಿದ್ದು ಕನ್ನಡ ಚಿತ್ರರಂಗದಲ್ಲಿ. ಪ್ರಯೋಗಶೀಲ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರ ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಿಂದ ಗುರುತಿಸಿಕೊಂಡಿರುವ ರಾಧಾ ಅವರ ಅಭಿನಯದ ಸ್ಮರಣೀಯ ಚಿತ್ರಗಳೆಂದರೆ ಆರು ಮೂರು ಒಂಭತ್ತು(೧೯೭೦), ಭಲೇ ಅದೃಷ್ಟವೋ ಅದೃಷ್ಟ(೧೯೭೧), ಯಾವ ಜನ್ಮದ ಮೈತ್ರಿ(೧೯೭೨), ದೇವರು ಕೊಟ್ಟ ತಂಗಿ(೧೯೭೩) ಮತ್ತು ಮಿಥಿಲೆಯ ಸೀತೆಯರು(೧೯೮೮). ನಾಯಕಿ, ಎರಡನೇ ನಾಯಕಿ, ಪೋಷಕ, ಹಾಸ್ಯ ಮತ್ತು ಖಳನ ಛಾಯೆಯಿರುವ ಪಾತ್ರಗಳನ್ನು ನಿರ್ವಹಿಸುವ ಮೂಲಕ ಒಬ್ಬ ನಟಿ ಮಾಡಬಹುದಾದ ಎಲ್ಲ ವಿಧದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮನ್ನಣೆ ಗಳಿಸಿರುವ ಅಪರೂಪದ ಅಭಿನೇತ್ರಿ. ಚಿತ್ರ ನಿರ್ಮಾಪಕಿಯೂ ಆಗಿರುವ ರಾಧ ಜಂಬೂಸವಾರಿ(೧೯೮೯) ಮತ್ತು ಹರಕೆಯ ಕುರಿ(೧೯೯೨)ಗಳಂತಹ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ[೨][೩][೪].

ಬಿ.ವಿ.ರಾಧಾ
ಜನನ
ರಾಜಲಕ್ಷ್ಮಿ

ಅಗಸ್ಟ್ ೧೯೪೮
ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
ಮರಣ೧೦ ಸೆಪ್ಟೆಂಬರ್ ೨೦೧೭ [೧]
ವೃತ್ತಿ(ಗಳು)ನಟಿ, ನಿರ್ಮಾಪಕಿ
Years active೧೯೬೪–ಪ್ರಸ್ತುತ
ಸಂಗಾತಿಕೆ.ಎಸ್.ಎಲ್.ಸ್ವಾಮಿ

ಆರಂಭಿಕ ಜೀವನ

೧೯೪೮ನೇ ಇಸವಿಯ ಅಗಸ್ಟ್ನಲ್ಲಿ ಬೆಂಗಳೂರಿನ ಒಂದು ರೈತ ಕುಟುಂಬದ ಗಂಗಪ್ಪ ಮತ್ತು ನಾಗಮ್ಮ ದಂಪತಿಯ ಎರಡನೆ ಮಗುವಾಗಿ ಜನಿಸಿದ ರಾಧ ಅವರ ಮೂಲ ಹೆಸರು ರಾಜಲಕ್ಷ್ಮಿ. ಚಿಕ್ಕಂದಿನಲ್ಲಿ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿರದ ರಾಧ ಶಾಲೆಗೆ ಹೋಗಿ ಬರುವಾಗ ಚಲನಚಿತ್ರಗಳ ಭಿತ್ತಿಪತ್ರಗಳನ್ನು ನೋಡುತ್ತಾ ಮೈಮರೆಯುತ್ತಿದ್ದರು. ಮನೆಯ ಸಮೀಪದಲ್ಲಿದ್ದ ಚಿತ್ರರಂಗದಲ್ಲಿದ್ದ ಒಬ್ಬ ವ್ಯಕ್ತಿಯ ಸಲಹೆಯ ಮೇರೆಗೆ ಮದ್ರಾಸ್ಗೆ ತೆರಳಿ ನವಕೋಟಿ ನಾರಾಯಣ(೧೯೬೪) ಚಿತ್ರದಲ್ಲಿನ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರಾಧ ತಮ್ಮ ಹೆಸರನ್ನು ಬಿ.ವಿ.ರಾಧ(ಬೆಂಗಳೂರು ವಿಜಯ ರಾಧ) ಎಂದು ಬದಲಾಯಿಸಿಕೊಂಡರು. ತನ್ನ ಮಗಳು ನಟಿಯಾಗುವುದಕ್ಕೆ ರಾಧಾರ ತಾಯಿಯವರ ವಿರೋಧವಿದ್ದರು ತಂದೆಯವರ ಪ್ರೋತ್ಸಾಹದಿಂದ ನಟಿಯಾಗಿ ಜನಮೆಚ್ಚುಗೆ ಪಡೆದರು[೨].

ವೃತ್ತಿಜೀವನ

ಬೆಳ್ಳಿತೆರೆ

೧೯೬೪ರಲ್ಲಿ ತೆರೆಗೆ ಬಂದ ರಾಜ್ ಕುಮಾರ್ ಮತ್ತು ಸಾಹುಕಾರ್ ಜಾನಕಿ ಮುಖ್ಯಭೂಮಿಕೆಯಲ್ಲಿದ್ದ ನವಕೋಟಿ ನಾರಾಯಣ ಚಿತ್ರದ ಚಿಕ್ಕ ಪಾತ್ರದ ಮೂಲಕ ಕನ್ನಡದ ಬೆಳ್ಳಿತೆರೆಯನ್ನು ಪ್ರವೇಶಿಸಿದ ರಾಧ ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ ಮೊದಲ ಚಿತ್ರ ತೂಗುದೀಪ(೧೯೬೬)ದಲ್ಲಿ ನರಸಿಂಹರಾಜು ಅವರೊಂದಿಗಿನ ಹಾಸ್ಯ ಪಾತ್ರದಿಂದ ಜನಪ್ರಿಯತೆ ಪಡೆದುದಲ್ಲದೇ ಬೇಡಿಕೆಯ ನಟಿಯಾದರು. ನರಸಿಂಹರಾಜು ಅವರೊಂದಿಗೆ ಕಿಲಾಡಿ ರಂಗ(೧೯೬೬), ಮನಸ್ಸಿದ್ದರೆ ಮಾರ್ಗ(೧೯೬೭), ರಾಜದುರ್ಗದ ರಹಸ್ಯ(೧೯೬೭) ಮತ್ತು ದ್ವಾರಕೀಶ್ ಅವರೊಂದಿಗೆ ಲಗ್ನಪತ್ರಿಕೆ(೧೯೬೭), ಮಂಕುದಿಣ್ಣೆ(೧೯೬೮) ಮುಂತಾದ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ರಾಧ ರಂಗ ಅವರೊಂದಿಗೆ ಅಭಿನಯಿಸಿದ ಒಂದೇ ಬಳ್ಳಿಯ ಹೂಗಳು(೧೯೬೭) ಚಿತ್ರದ ಮುಗ್ಧ ಹುಡುಗಿಯ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

ರಾಧ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿದ ಚಿತ್ರ ಹಣ್ಣೆಲೆ ಚಿಗುರಿದಾಗ(೧೯೬೭). ಅಂದಿನ ತನಕ ಹಾಸ್ಯ ನಟಿಯಾಗಿ ಜನಪ್ರಿಯರಾಗಿದ್ದ ರಾಧ ರಾಜ್‌ಕುಮಾರ್ ಮತ್ತು ಕಲ್ಪನಾ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ನಾಯಕನ ಮೊದಲ ಪತ್ನಿಯಾಗಿ ಚಿಕ್ಕ ಪಾತ್ರದಲ್ಲಿ ಚೊಕ್ಕದಾದ ಅಭಿನಯ ನೀಡಿದ್ದರು. ಕೆ.ಎಸ್.ಎಲ್.ಸ್ವಾಮಿಯವರ ಗಾಂಧಿನಗರ(೧೯೬೮) ಚಿತ್ರದಲ್ಲಿ ಬಡ ನಾಯಕನ ಬಗ್ಗೆ ಸಹಾನುಭೂತಿ ಹೊಂದಿರುವ ಶ್ರೀಮಂತ ಬೆಡಗಿಯಾಗಿ ರಾಧಾರದ್ದು ಶಕ್ತ ಅಭಿನಯ. ಭಾಗ್ಯದ ಬಾಗಿಲು(೧೯೬೮) ವರನಟ ರಾಜ್‌ಕುಮಾರ್ ಅಭಿನಯದ ೧೦೦ನೇ ಚಿತ್ರ. ಕೆ.ಎಸ್.ಎಲ್.ಸ್ವಾಮಿಯವರ ನಿರ್ದೇಶನವಿದ್ದ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ರಾಧ ಸ್ಮರಣೀಯ ಅಭಿನಯ ನಿಡಿದ್ದಾರೆ. ರಾಧ ಕಲ್ಯಾಣ್ ಕುಮಾರ್ ಅವರೊಂದಿಗೆ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ(೧೯೬೮), ಉದಯಕುಮಾರ್ ಅವರೊಂದಿಗೆ ಮಕ್ಕಳೇ ಮನೆಗೆ ಮಾಣಿಕ್ಯ(೧೯೬೯) ಚಿತ್ರದಲ್ಲಿ ಸಮರ್ಥ ಅಭಿನಯ ನೀಡಿದರು.

ಸುಮಾರು ೬೦ರ ದಶಕದ ಉತ್ತರಾರ್ಧ ಮತ್ತು ೭೦ರ ದಶಕದ ಪೂರ್ವಾರ್ಧದಲ್ಲಿ ಬಿಡುಗಡೆಯಾದ ಬಹುತೇಕ ಬಹುತಾರಾಗಣದ ಕನ್ನಡ ಚಿತ್ರಗಳಲ್ಲಿ ರಾಧ ಅವರಿಗೆ ಮಹತ್ವಪೂರ್ಣ ಪಾತ್ರ ಇದ್ದೇ ಇರುತ್ತಿತ್ತು. ರಾಜ್‌ಕುಮಾರ್ ಅಭಿನಯದ ಭಲೇ ರಾಜ(೧೯೬೯) ಮತ್ತು ದೇವರು ಕೊಟ್ಟ ತಂಗಿ(೧೯೭೩) ಚಿತ್ರಗಳಲ್ಲಿ ನಾಯಕನ ತಂಗಿಯಾಗಿ ಭಾವಪೂರ್ಣ ಅಭಿನಯ ನೀಡಿದ ರಾಧ ವೈ.ಆರ್.ಸ್ವಾಮಿ ನಿರ್ದೇಶನದ ಭಲೇ ಜೋಡಿ(೧೯೭೦) ಚಿತ್ರದಲ್ಲಿ ರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ಪ್ರಬುದ್ಧ ಅಭಿನಯ ನೀಡಿದ್ದಾರೆ. ಮೇಯರ್ ಮುತ್ತಣ್ಣ(೧೯೬೯), ಚೂರಿ ಚಿಕ್ಕಣ್ಣ(೧೯೬೯), ಮುಕುಂದ ಚಂದ್ರ(೧೯೬೯), ರಂಗಮಹಲ್ ರಹಸ್ಯ(೧೯೭೦), ಮೊದಲರಾತ್ರಿ(೧೯೭೦), ಮೂರು ಮುತ್ತುಗಳು(೧೯೭೦), ಅಮರಭಾರತಿ(೧೯೭೧), ಅನುಗ್ರಹ(೧೯೭೧) ಮುಂತಾದ ಚಿತ್ರಗಳಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದ ರಾಧ ಅವರು ಅನಿರೀಕ್ಷಿತ(೧೯೭೦) ಚಿತ್ರದಲ್ಲಿ ನಾಯಕಿಯ ಆಪ್ತ ಗೆಳತಿಯಾಗಿ, ನಮ್ಮ ಸಂಸಾರ(೧೯೭೧) ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ಮತ್ತು ಯಾವ ಜನ್ಮದ ಮೈತ್ರಿ(೧೯೭೨) ಚಿತ್ರದಲ್ಲಿ ಮಾನಸಿಕ ಅಸ್ವಸ್ಥ ನಾಯಕಿಯ ಚಿಕಿತ್ಸೆಗಾಗಿ ತನ್ನ ಪತಿಯನ್ನು ಆಕೆಯ ಪತಿಯಂತೆ ನಟಿಸಲು ಒಪ್ಪಿಸುವ ಸಹೃದಯಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ.

ರಾಧ ಅವರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡ ಚಿತ್ರಗಳೆಂದರೆ ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ಆರು ಮೂರು ಒಂಭತ್ತು(೧೯೭೦) ಹಾಗು ಭಲೇ ಅದೃಷ್ಟವೋ ಅದೃಷ್ಟ(೧೯೭೧). ಸಮಾಜದಲ್ಲಿ ಅನಾಥ ಯುವತಿಯ ಸ್ಥಾನಮಾನ ಮತ್ತು ಆಕೆ ಎದುರಿಸುವ ಕಷ್ಟಗಳನ್ನು ಸಹಜವಾಗಿ ಚಿತ್ರಿಸಿದ ಆರು ಮೂರು ಒಂಭತ್ತು ಎಂಬ ಪ್ರಯೋಗಾತ್ಮಕ ಚಿತ್ರದಲ್ಲಿ ಮೇರಿ ಎಂಬ ಅನಾಥ ಯುವತಿಯಾಗಿ ರಾಧ ಅವಿಸ್ಮರಣೀಯ ಅಭಿನಯ ನೀಡಿದ್ದಾರೆ. ಈ ಚಿತ್ರದಲ್ಲಿ ಅವರು ಉದಯಕುಮಾರ್, ರಾಜೇಶ್, ಸುದರ್ಶನ್, ರಮೇಶ್, ಶ್ರೀನಾಥ್ ಹೀಗೆ ಒಂಭತ್ತು ನಾಯಕರೊಂದಿಗೆ ನಟಿಸಿದ್ದಾರೆ. ಭಲೇ ಅದೃಷ್ಟವೋ ಅದೃಷ್ಟ ಚಿತ್ರದಲ್ಲಿ ಬಡ ಗೆಳತಿಯ ಬದುಕನ್ನು ಹಸನಾಗಿಸುವ ಸಲುವಾಗಿ ಸುಳ್ಳು ಹೇಳಿ ಆಕೆಯನ್ನು ತನ್ನ ಸೋದರ ಸಂಬಂಧಿಗೆ ಮದುವೆ ಮಾಡಿಸಿ ನಂತರ ಎದುರಾಗುವ ಪೇಚಾಟದ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸುವ ಹಾಸ್ಯಮಯ ಪಾತ್ರದಲ್ಲಿ ರಾಧ ನೈಜ ಅಭಿನಯ ನೀಡಿದ್ದಾರೆ.

ಹೀಗೆ ನಾಯಕಿಯಾಗಿ ಉತ್ತುಂಗದಲ್ಲಿರುವಾಗಲೆ ಖಳನ ಛಾಯೆಯಿರುವ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿದ್ದರು. ರಾಜ್‌ಕುಮಾರ್ ಮತ್ತು ಭಾರತಿ ಅಭಿನಯದ ಅವಿಸ್ಮರಣೀಯ ಚಿತ್ರ ಬಂಗಾರದ ಮನುಷ್ಯ(೧೯೭೨)ದಲ್ಲಿ ಋಣಾತ್ಮಕ ಪಾತ್ರದಲ್ಲಿ ನಟಿಸಿದ ರಾಧ ಮುಂದೆ ಭಲೇ ಹುಚ್ಚ(೧೯೭೨), ನಂದಗೋಕುಲ(೧೯೭೨), ಅಣ್ಣ ಅತ್ತಿಗೆ(೧೯೭೪), ಮಕ್ಕಳ ಭಾಗ್ಯ(೧೯೭೬) ಚಿತ್ರಗಳಲ್ಲು ಇಂತಹುದೆ ಪಾತ್ರಗಳಲ್ಲಿ ಮಿಂಚಿದ್ದಾರೆ. ೧೯೭೬ರಲ್ಲಿ ತೆರೆಗೆ ಬಂದ ಸರ್ಪಕಾವಲು(೧೯೭೫) ಎಂಬ ಚಿತ್ರದಲ್ಲಿ ತಮಗಿಂತ ಹಿರಿಯರಾದ ನಟ ರಾಜೇಶ್ ಅವರಿಗೆ ತಾಯಿಯಾಗಿ ನೀಡಿದ ಅಭಿನಯ ಅಮೋಘ. ಈ ನಡುವೆ ಪೌರಾಣಿಕ ಚಿತ್ರ ಸುಭದ್ರಾ ಕಲ್ಯಾಣ(೧೯೭೨), ಭಯಾನಕ ಚಿತ್ರ ಜ್ವಾಲಾ ಮೋಹಿನಿ(೧೯೭೩) ಮತ್ತು ಭಕ್ತಿಪ್ರಧಾನ ಚಿತ್ರ ಮಹದೇಶ್ವರ ಪೂಜಾಫಲ(೧೯೭೪) ಮುಂತಾದವುಗಳಲ್ಲಿ ನಾಯಕಿಯಾಗಿ ನಟಿಸಿ ವಿಭಿನ್ನತೆ ಮೆರೆದರು.

೧೯೭೦ರ ದಶಕದ ಕೊನೆಯಲ್ಲಿ ಬಂದ ಬನಶಂಕರಿ(೧೯೭೭), ನಾಗರಹೊಳೆ(೧೯೭೭), ಪಾವನಗಂಗಾ(೧೯೭೭) ಮುಂತಾದ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿ, ಒಳ್ಳೆಯ ಅವಕಾಶಗಳ ಕೊರತೆಯಿಂದ ಕ್ರಮೇಣ ನೇಪಥ್ಯಕ್ಕೆ ಸರಿದರು.

೮೦ರ ದಶಕದಲ್ಲಿ ನಿರ್ಮಾಪಕಿಯಾಗಿ ಮುತ್ತೈದೆ ಭಾಗ್ಯ(೧೯೮೩), ಮತ್ತೆ ವಸಂತ(೧೯೮೩), ಮಾವನೊ ಅಳಿಯನೊ(೧೯೮೫) ಮುಂತಾದ ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರ ರಸಿಕರಿಗೆ ನೀಡಿದರು. ೧೯೮೮ರಲ್ಲಿ ತಯಾರಾದ ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ ಕಾದಂಬರಿ ಆಧಾರಿತ ಮಿಥಿಲೆಯ ಸೀತೆಯರು(೧೯೮೮) ಎಂಬ ಚಿತ್ರವನ್ನು ನಿರ್ಮಿಸಿದ್ದಲ್ಲದೇ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಬೇಕೆಂಬ ಪರಿಜ್ಞಾನವೇ ಇಲ್ಲದ ಜೂಜುಕೋರನ ಪತ್ನಿಯಾಗಿ, ತಂದೆಯ ನಡವಳಿಕೆಯಿಂದಾಗಿ ನೋವು ಅನುಭವಿಸುವ ಮೂವರು ಹೆಣ್ಣು ಮಕ್ಕಳ ಅಸಹಾಯಕ ತಾಯಿಯಾಗಿ ರಾಧ ಅವಿಸ್ಮರಣೀಯ ಅಭಿನಯ ನೀಡಿದ್ದರು. ಆ ನಂತರದಲ್ಲಿ ಪೋಷಕ ನಟಿಯಾಗಿ ಪಾಳೇಗಾರ(೧೯೯೬), ಹೂಮಳೆ(೧೯೯೮), ದಾಯಾದಿ(೧೯೯೮), ಸ್ನೇಹಲೋಕ(೧೯೯೯) ಮತ್ತಿತರ ಚಿತ್ರಗಳಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.

ಕನ್ನಡ ಮಾತ್ರವಲ್ಲದೇ ಕೆಲವು ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ತುಳು ಚಿತ್ರಗಳಲ್ಲೂ ರಾಧ ಅಭಿನಯಿಸಿದ್ದಾರೆ. ಎಮ್.ಜಿ.ಆರ್. ಅಭಿನಯದ ತಾಳಂಬು(೧೯೬೫) ಎನ್ನುವ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ರಾಧ ಜೈಶಂಕರ್ ಅಭಿನಯದ ಯಾರ್ ನೀ(೧೯೬೬) ಮತ್ತು ಸಿ.ಐ.ಡಿ.ಶಂಕರ್(೧೯೭೦), ರವಿಚಂದ್ರನ್ ಅಭಿನಯದ ನಿಮಿರಿಂದು ನಿಲ್(೧೯೬೮) ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. ೧೯೭೦ರ ದಶಕದ ಆರಂಭದಲ್ಲಿ ಯಾನ್ ಸನ್ಯಾಸಿ ಆಪೆ(೧೯೭೩), ಕಾಸ್ ದಾಯೆ ಕಂಡನೆ(೧೯೭೩) ಮತ್ತು ಯೇರ್ ಮಲ್ತಿನ ತಪ್ಪು(೧೯೭೪) ಮುಂತಾದ ತುಳು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ದಶಕಗಳ ಕಾಲ ದೊರೆತ ಎಲ್ಲ ಪಾತ್ರಗಳನ್ನು ಶೃದ್ಧೆಯಿಂದ ನಿರ್ವಹಿಸಿ ಅಪಾರ ಜನಾನುರಾಗ ಗಳಿಸಿದ ರಾಧ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್, ರಾಜಾಶಂಕರ್, ರಾಜೇಶ್, ಗಂಗಾಧರ್, ಶ್ರೀನಾಥ್, ವಿಷ್ಣುವರ್ಧನ್, ಲೋಕೇಶ್, ಸುದರ್ಶನ್, ರಮೇಶ್, ನರಸಿಂಹರಾಜು, ದ್ವಾರಕೀಶ್ ಮುಂತಾದ ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕರೊಂದಿಗೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಓರಗೆಯ ನಟಿಯರಾದ ಕಲ್ಪನಾ, ವಂದನಾ, ಜಯಂತಿ, ಭಾರತಿ, ಚಂದ್ರಕಲಾ, ಉದಯಚಂದ್ರಿಕಾ ಮುಂತಾದವರೊಂದಿಗೆ ಬೆಳ್ಳಿ ತೆರೆಯನ್ನು ಹಂಚಿಕೊಂಡು ಪೈಪೋಟಿಯ ಅಭಿನಯ ನೀಡಿದ್ದಾರೆ. ಪ್ರತಿಭಾವಂತ ನಿರ್ದೇಶಕರಾದ ಕೆ.ಎಸ್.ಎಲ್.ಸ್ವಾಮಿ, ವೈ.ಆರ್.ಸ್ವಾಮಿ, ಎಂ.ಆರ್.ವಿಠಲ್, ಬಿ.ಆರ್.ಪಂತುಲು, ಸಿದ್ದಲಿಂಗಯ್ಯ, ಗೀತಪ್ರಿಯ ಮುಂತಾದವರ ನಿರ್ದೇಶನದಲ್ಲಿ ಅಭಿನಯಿಸಿದ ಕೀರ್ತಿ ಇವರದ್ದು.[೨]

ಕಿರುತೆರೆ

ಕಿರುತೆರೆ ಕಲಾವಿದೆಯೂ ಆಗಿರುವ ಬಿ.ವಿ.ರಾಧ ಉದಯ ವಾಹಿನಿಯ ಕುಂಕುಮ ಭಾಗ್ಯ, ಜೀ ಕನ್ನಡ ವಾಹಿನಿಯ ಚಿ.ಸೌ.ಸಾವಿತ್ರಿ ಮತ್ತು ಪುನರ್ ವಿವಾಹದಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ವೈಯಕ್ತಿಕ ಜೀವನ

೧೯೬೭ರಲ್ಲಿ ತಯಾರಾದ ಲಗ್ನಪತ್ರಿಕೆ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪರಸ್ಪರ ಪ್ರೀತಿಸಿದ್ದ ಕೆ.ಎಸ್.ಎಲ್.ಸ್ವಾಮಿ ಮತ್ತು ರಾಧ ಸರಳವಾಗಿ ಮದುವೆಯಾದರು. ವೈಯಕ್ತಿಕ ಬದುಕಿನಲ್ಲಿ ಬಂದ ಎಲ್ಲ ಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಿದ ಮಾದರಿ ದಾಂಪತ್ಯ ಇವರದ್ದಾಗಿತ್ತು. ೨೦೧೫ ಅಕ್ಟೋಬರ್ ೨೦ರಂದು ಅಗಲಿದ ತಮ್ಮ ಪತಿಯ ನೆನಪಿನೊಂದಿಗೆ ಬೆಂಗಳೂರಿನ ಹೊರಮಾವಿನಲ್ಲಿರುವ ನಿವಾಸದಲ್ಲಿ ಮಗಳು ಧನಲಕ್ಷ್ಮಿಯವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ[೨]. ಒಳ್ಳೆಯ ನಟಿ

ಪ್ರಶಸ್ತಿ/ಪುರಸ್ಕಾರ

  • ೧೯೮೯ರಲ್ಲಿ ರಾಧ ನಿರ್ಮಿಸಿದ ಚಿತ್ರ ಜಂಬೂಸವಾರಿ ಚಿತ್ರಕ್ಕೆ ಸ್ವರ್ಣ ಕಮಲ ರಾಷ್ಟ್ರೀಯ ಪ್ರಶಸ್ತಿ (ಶ್ರೇಷ್ಠ ಮಕ್ಕಳ ಚಿತ್ರ).
  • ೧೯೯೨ರಲ್ಲಿ ರಾಧ ನಿರ್ಮಿಸಿದ ಚಿತ್ರ ಹರಕೆಯ ಕುರಿ ಚಿತ್ರಕ್ಕೆ ರಜತ ಕಮಲ ರಾಷ್ಟ್ರೀಯ ಪ್ರಶಸ್ತಿ (ಶ್ರೇಷ್ಠ ಕನ್ನಡ ಚಿತ್ರ).
  • ೨೦೦೩ರಲ್ಲಿ ರಾಧ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯಸರ್ಕಾರದ ರಾಜ್ಯೋತ್ಸವ ಪುರಸ್ಕಾರವನ್ನು ಪಡೆದಿದ್ದರು.
  • ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ(ಪಿಆರ್‌ಸಿಐ) ಸಂವಹನ ಪ್ರಶಸ್ತಿ (೨೦೧೧)[೫]
  • ಪಂಢರೀಬಾಯಿ ಪ್ರಶಸ್ತಿ - ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಇಲಾಖೆ(೨೦೧೭)[೬]

ಬಿ.ವಿ.ರಾಧಾ ಅಭಿನಯದ ಚಿತ್ರಗಳು

ವರ್ಷಚಿತ್ರಭಾಷೆಪಾತ್ರನಿರ್ದೇಶನಭೂಮಿಕೆ
೧೯೬೪ನವಕೋಟಿ ನಾರಾಯಣಕನ್ನಡರಾಜ್ ಕುಮಾರ್, ಸಾಹುಕಾರ್ ಜಾನಕಿ
೧೯೬೬ತೂಗುದೀಪಕನ್ನಡಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ಲೀಲಾವತಿ, ನರಸಿಂಹರಾಜು
೧೯೬೬ಪ್ರೇಮಮಯಿಕನ್ನಡಎಂ.ಆರ್.ವಿಠಲ್ರಾಜ್ ಕುಮಾರ್, ಜಯಂತಿ, ಲೀಲಾವತಿ
೧೯೬೬ಕಿಲಾಡಿ ರಂಗಕನ್ನಡಜಿ.ವಿ.ಅಯ್ಯರ್ರಾಜ್ ಕುಮಾರ್, ಜಯಂತಿ, ನರಸಿಂಹರಾಜು
೧೯೬೬ದೇವಮಾನವಕನ್ನಡಉದಯಕುಮಾರ್, ವಂದನಾ, ಜಯಂತಿ
೧೯೬೭ರಾಜದುರ್ಗದ ರಹಸ್ಯಕನ್ನಡರಾಜ್ ಕುಮಾರ್, ಭಾರತಿ
೧೯೬೭ಒಂದೇ ಬಳ್ಳಿಯ ಹೂಗಳುಕನ್ನಡಚಂದ್ರಕಲಾ, ಕೆ.ಎಸ್.ಅಶ್ವಥ್, ಪಂಡರೀಬಾಯಿ, ರಾಜಾಶಂಕರ್, ಜಯಂತಿ, ರಂಗ
೧೯೬೭ಮನಸ್ಸಿದ್ದರೆ ಮಾರ್ಗಕನ್ನಡರಾಜ್ ಕುಮಾರ್, ಜಯಂತಿ, ರಾಜಾಶಂಕರ್, ಉದಯಚಂದ್ರಿಕಾ
೧೯೬೭ಲಗ್ನಪತ್ರಿಕೆಕನ್ನಡಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ಜಯಂತಿ
೧೯೬೮ಮಂಕುದಿಣ್ಣೆಕನ್ನಡಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್, ವಂದನಾ
೧೯೬೮ಮನಸ್ಸಾಕ್ಷಿಕನ್ನಡರಾಜ್ ಕುಮಾರ್, ಭಾರತಿ
೧೯೬೮ಹಣ್ಣೆಲೆ ಚಿಗುರಿದಾಗಕನ್ನಡಎಂ.ಆರ್.ವಿಠಲ್ರಾಜ್ ಕುಮಾರ್, ಕಲ್ಪನಾ
೧೯೬೮ಗಾಂಧಿನಗರಕನ್ನಡಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ಕಲ್ಪನಾ
೧೯೬೮ಭಾಗ್ಯದ ಬಾಗಿಲುಕನ್ನಡಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ವಂದನಾ
೧೯೬೮ಭಾಗ್ಯದೇವತೆಕನ್ನಡರಾಜ್ ಕುಮಾರ್, ಲೀಲಾವತಿ, ಉದಯಚಂದ್ರಿಕಾ
೧೯೬೮ಬೆಂಗಳೂರು ಮೈಲ್ಕನ್ನಡರಾಜ್ ಕುಮಾರ್, ಜಯಂತಿ
೧೯೬೮ಬೇಡಿ ಬಂದವಳುಕನ್ನಡಕಲ್ಯಾಣ್ ಕುಮಾರ್, ಚಂದ್ರಕಲಾ, ಶೈಲಶ್ರೀ
೧೯೬೮ಅತ್ತೆಗೊಂದು ಕಾಲ ಸೊಸೆಗೊಂದು ಕಾಲಕನ್ನಡವೈ.ಆರ್.ಸ್ವಾಮಿಕಲ್ಯಾಣ್ ಕುಮಾರ್, ಲೀಲಾವತಿ
೧೯೬೯ಮುಕುಂದ ಚಂದ್ರಕನ್ನಡಕಲ್ಯಾಣ್ ಕುಮಾರ್, ಕಲ್ಪನಾ
೧೯೬೯ಮೇಯರ್ ಮುತ್ತಣ್ಣಕನ್ನಡಸಿದ್ದಲಿಂಗಯ್ಯರಾಜ್ ಕುಮಾರ್, ಭಾರತಿ
೧೯೬೯ಮಕ್ಕಳೇ ಮನೆಗೆ ಮಾಣಿಕ್ಯಕನ್ನಡಎ.ವಿ.ಶೇಷಗಿರಿ ರಾವ್ಉದಯಕುಮಾರ್, ಶೈಲಶ್ರೀ, ರಂಗ
೧೯೬೯ಚೂರಿ ಚಿಕ್ಕಣ್ಣಕನ್ನಡಅರ್.ರಾಮಮೂರ್ತಿರಾಜ್ ಕುಮಾರ್, ಜಯಂತಿ
೧೯೬೯ಭಲೇ ರಾಜಕನ್ನಡವೈ.ಆರ್.ಸ್ವಾಮಿರಾಜ್ ಕುಮಾರ್, ಜಯಂತಿ
೧೯೬೯ವಿಚಿತ್ರ ಸಂಸಾರಕನ್ನಡದ್ವಾರಕೀಶ್, ಮೈನಾವತಿ
೧೯೭೦ಅನಿರೀಕ್ಷಿತಕನ್ನಡಶ್ರೀನಾಥ್, ಕಲ್ಪನಾ
೧೯೭೦ಅರಿಶಿನ ಕುಂಕುಮಕನ್ನಡಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್, ಕಲ್ಪನಾ
೧೯೭೦ಆರು ಮೂರು ಒಂಬತ್ತುಕನ್ನಡಮೇರಿಕೆ.ಎಸ್.ಎಲ್.ಸ್ವಾಮಿಉದಯಕುಮಾರ್, ರಾಜೇಶ್, ರಮೇಶ್, ಸುದರ್ಶನ್, ದಿನೇಶ್
೧೯೭೦ಗೆಜ್ಜೆಪೂಜೆಕನ್ನಡಕಲ್ಪನಾ, ಗಂಗಾಧರ್
೧೯೭೦ನಮ್ಮ ಮನೆಕನ್ನಡರಾಜೇಶ್, ಕಲ್ಪನಾ
೧೯೭೦ಪ್ರತಿಕಾರಕನ್ನಡಎಂ.ಎಸ್.ಗೋಪಿನಾಥ್ಉದಯಕುಮಾರ್, ಕಲ್ಪನಾ
೧೯೭೦ಭಲೇ ಜೋಡಿಕನ್ನಡವೈ.ಆರ್.ಸ್ವಾಮಿರಾಜ್ ಕುಮಾರ್, ಭಾರತಿ
೧೯೭೦ಮೂರು ಮುತ್ತುಗಳುಕನ್ನಡರಾಜೇಶ್, ಶ್ರೀನಾಥ್, ಪಂಡರೀಬಾಯಿ, ಮೈನಾವತಿ
೧೯೭೦ಮೊದಲ ರಾತ್ರಿಕನ್ನಡವಿಜಯ್ಶ್ರೀನಾಥ್, ರಾಜಶ್ರೀ, ನರಸಿಂಹರಾಜು
೧೯೭೦ರಂಗಮಹಲ್ ರಹಸ್ಯಕನ್ನಡವಿಜಯ್ಶ್ರೀನಾಥ್, ಭಾರತಿ
೧೯೭೦ಲಕ್ಷ್ಮಿ ಸರಸ್ವತಿಕನ್ನಡಕೆ.ಎಸ್.ಎಲ್.ಸ್ವಾಮಿಬಿ.ಸರೋಜದೇವಿ, ರಮೇಶ್, ಸುದರ್ಶನ್
೧೯೭೧ಅನುಗ್ರಹಕನ್ನಡಶ್ರೀನಾಥ್, ಆರತಿ
೧೯೭೧ಅಮರಭಾರತಿಕನ್ನಡಕಲ್ಯಾಣ್ ಕುಮಾರ್, ಚಂದ್ರಕಲಾ
೧೯೭೧ಭಲೇ ಅದೃಷ್ಟವೋ ಅದೃಷ್ಟಕನ್ನಡಕೆ.ಎಸ್.ಎಲ್.ಸ್ವಾಮಿಶ್ರೀನಾಥ್, ಕಲ್ಪನಾ, ಗಂಗಾಧರ್
೧೯೭೧ನಗುವ ಹೂವುಕನ್ನಡಸುದರ್ಶನ್, ಶೈಲಶ್ರೀ
೧೯೭೧ನಮ್ಮ ಸಂಸಾರಕನ್ನಡಸಿದ್ದಲಿಂಗಯ್ಯರಾಜ್ ಕುಮಾರ್, ಭಾರತಿ, ರಾಜಾಶಂಕರ್
೧೯೭೨ಒಂದು ಹೆಣ್ಣಿನ ಕಥೆಕನ್ನಡರಾಜೇಶ್, ಸುದರ್ಶನ್, ಎಂ.ವಿ.ರಾಜಮ್ಮ, ಜಯಂತಿ
೧೯೭೨ಕ್ರಾಂತಿವೀರಕನ್ನಡರಾಜ್ ಕುಮಾರ್, ಜಯಂತಿ
೧೯೭೨ಯಾವ ಜನ್ಮದ ಮೈತ್ರಿಕನ್ನಡಗೀತಪ್ರಿಯಕಲ್ಪನಾ, ಗಂಗಾಧರ್
೧೯೭೨ನಂದಗೋಕುಲಕನ್ನಡವೈ.ಆರ್.ಸ್ವಾಮಿರಾಜ್ ಕುಮಾರ್, ಜಯಂತಿ, ರಮೇಶ್
೧೯೭೨ಬಂಗಾರದ ಮನುಷ್ಯಕನ್ನಡಸಿದ್ದಲಿಂಗಯ್ಯರಾಜ್ ಕುಮಾರ್, ಭಾರತಿ
೧೯೭೨ಭಲೇ ಹುಚ್ಚಕನ್ನಡರಾಜ್ ಕುಮಾರ್, ಆರತಿ, ಶ್ರೀನಾಥ್
೧೯೭೨ಬಾಂಧವ್ಯಕನ್ನಡರಾಜೇಶ್, ಗಂಗಾಧರ್, ಪಂಡರೀಬಾಯಿ
೧೯೭೨ವಿಷಕನ್ಯೆಕನ್ನಡವೇದಾರಾಜೇಶ್, ಜಯಂತಿ
೧೯೭೨ಸುಭದ್ರಾ ಕಲ್ಯಾಣಕನ್ನಡಸತ್ಯಭಾಮರಾಜೇಶ್, ಕಲ್ಪನಾ, ಗಂಗಾಧರ್, ವಿಜಯಕಲಾ
೧೯೭೩ಜ್ವಾಲಾ ಮೋಹಿನಿಕನ್ನಡಬಿ.ಎಂ.ವೆಂಕಟೇಶ್, ರಾಜಶ್ರೀ
೧೯೭೩ಸಿ.ಐ.ಡಿ.೭೨ಕನ್ನಡಕೆ.ಎಸ್.ಎಲ್.ಸ್ವಾಮಿರಾಜೇಶ್, ಶ್ರೀನಾಥ್, ರಾಜಶ್ರೀ
೧೯೭೩ದೇವರು ಕೊಟ್ಟ ತಂಗಿಕನ್ನಡಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ಜಯಂತಿ
೧೯೭೩ಬಂಗಾರದ ಕಳ್ಳಕನ್ನಡಎಸ್.ಎನ್.ಸಿಂಗ್ಸಂಗ್ರಾಮ್ ಸಿಂಗ್, ಅನಿತ
೧೯೭೪ಅಣ್ಣ ಅತ್ತಿಗೆಕನ್ನಡವಿಷ್ಣುವರ್ಧನ್, ಭಾರತಿ, ಕೆ.ಎಸ್.ಅಶ್ವಥ್, ಪಂಡರೀಬಾಯಿ
೧೯೭೪ಪ್ರೇಮಪಾಶಕನ್ನಡಉದಯಕುಮಾರ್, ಲೀಲಾವತಿ
೧೯೭೫ಮಹದೇಶ್ವರ ಪೂಜಾಫಲಕನ್ನಡಶ್ರೀನಾಥ್, ರಾಜಶ್ರೀ
೧೯೭೫ಸರ್ಪಕಾವಲುಕನ್ನಡರಾಜೇಶ್, ಅನಿತ
೧೯೭೫ಶುಭಮಂಗಳಕನ್ನಡಶ್ರೀನಾಥ್, ಆರತಿ
೧೯೭೫ಮನೆ ಬೆಳಕುಕನ್ನಡವೈ.ಆರ್.ಸ್ವಾಮಿರಾಜೇಶ್, ಚಂದ್ರಕಲಾ
೧೯೭೫ನಾಗಕನ್ಯೆಕನ್ನಡವಿಷ್ಣುವರ್ಧನ್, ಭವಾನಿ
೧೯೭೫ಶುಭ ಮಂಗಳಕನ್ನಡಶ್ರೀನಾಥ್, ಆರತಿ
೧೯೭೫ವಿಪ್ಲವ ವನಿತೆಕನ್ನಡರಾಜೇಶ್, ವಿಜಯಲಲಿತ
೧೯೭೬ದೇವರು ಕೊಟ್ಟ ವರಕನ್ನಡರಾಮಮೂರ್ತಿವಿಷ್ಣುವರ್ಧನ್, ಜಯಂತಿ, ಗಂಗಾಧರ್
೧೯೭೬ಪುನರ್ದತ್ತಕನ್ನಡಸಿ.ಎಸ್.ರಾವ್ಲೋಕೇಶ್, ಆರತಿ
೧೯೭೬ಮಕ್ಕಳ ಭಾಗ್ಯಕನ್ನಡಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ಭಾರತಿ
೧೯೭೬ಮಾಯಾ ಮನುಷ್ಯಕನ್ನಡರಾಜೇಶ್, ಸುರೇಖ
೧೯೭೭ಪುನರ್ಮಿಲನಕನ್ನಡರಾಮ್ ಗೋಪಾಲ್, ಶ್ರೀಲಲಿತ
೧೯೭೭ಬನಶಂಕರಿಕನ್ನಡಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್, ಕೆ.ಆರ್.ವಿಜಯ
೧೯೭೭ಮನಸ್ಸಿನಂತೆ ಮಾಂಗಲ್ಯಕನ್ನಡಜಯಂತಿ, ಮಾನು, ಅಂಬರೀಶ್
೧೯೭೭ ಮುಗ್ಧ ಮಾನವಕನ್ನಡಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್, ಅಂಬರೀಶ್, ಶುಭ
೧೯೭೭ಪಾವನಗಂಗಾಕನ್ನಡಶ್ರೀನಾಥ್, ಆರತಿ, ಅಶೋಕ್
೧೯೭೭ನಾಗರ ಹೊಳೆಕನ್ನಡವಿಷ್ಣುವರ್ಧನ್, ಭಾರತಿ
೧೯೮೧ಚಂಚಲಕನ್ನಡಮೈಸೂರು ಗಿರೀಶ್ಮೈಸೂರು ಗಿರೀಶ್
೧೯೮೩ಮತ್ತೆ ವಸಂತಕನ್ನಡಕೆ.ಎಸ್.ಎಲ್.ಸ್ವಾಮಿಅಂಬರೀಶ್, ಶ್ರೀಪ್ರಿಯಾ, ರೂಪಾದೇವಿ
೧೯೮೫ಮಾವನೊ ಅಳಿಯನೊಕನ್ನಡಎನ್.ಚಂದ್ರಶೇಖರ್ ಶರ್ಮಲೋಕೇಶ್, ಅಶೋಕ್, ಭವ್ಯ
೧೯೮೮ಮಿಥಿಲೆಯ ಸೀತೆಯರುಕನ್ನಡಕೆ.ಎಸ್.ಎಲ್.ಸ್ವಾಮಿವಿಷ್ಣುವರ್ಧನ್, ಶಂಕರ್ ನಾಗ್, ಗೀತಾ
೧೯೯೦ನಂಬಿದ್ರೆ ನಂಬಿ ಬಿಟ್ರೆ ಬಿಡಿಕನ್ನಡಶ್ರೀನಿವಾಸಮೂರ್ತಿ
೧೯೯೮ದಾಯಾದಿಕನ್ನಡಕಲ್ಯಾಣ್ ಕುಮಾರ್, ದೇವರಾಜ್, ವಿನಯಾಪ್ರಸಾದ್

[೭]

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ