ನೆರಡಿ

ನೆರಡಿಯು ಕುರಿ, ಆಕಳು, ಎಮ್ಮೆ, ಕುದುರೆ, ಹಂದಿ, ಮೇಕೆ, ಒಂಟೆ, ಜಿಂಕೆ ಮುಂತಾದ ಜಾನುವಾರುಗಳನ್ನು ಬಾಧಿಸುವ ವಿಷಮ ಸಾಂಕ್ರಮಿಕ ರೋಗ (ಆಂತ್ರಾಕ್ಸ್). ಬ್ಯಾಸಿಲಸ್ ಆಂತ್ರಸಿಸ್ ಎಂಬ ಕಡ್ಡಿ ಆಕಾರದ ಸೂಕ್ಷ್ಮಾಣುಜೀವಿ ಈ ರೋಗಕ್ಕೆ ಕಾರಣ.[೧] ಜ್ವರ, ಗುಲ್ಮ ಅತಿ ದೊಡ್ಡದಾಗುವುದು, ದೇಹದೊಳಗಿನ ದ್ರವಗಳು ರಕ್ತಮಿಶ್ರಿತವಾಗಿರುವುದು ಇವು ಈ ರೋಗದ ಮುಖ್ಯ ಚಿಹ್ನೆಗಳು. ಮಾಂಸಾಹಾರಿ ಪ್ರಾಣಿಗಳಾದ ನಾಯಿ, ನರಿ, ಬೆಕ್ಕುಗಳಲ್ಲಿ ಕಾಣಿಸುವುದು ಅಪರೂಪ. ಕುರಿ ಮತ್ತು ಆಕಳುಗಳಲ್ಲಿ ಹಲವು ವೇಳೆ ರೋಗ ಹಠಾತ್ತನೆ ಸಂಭವಿಸಿ, ರೋಗದ ಚಿಹ್ನೆಗಳನ್ನು ಗುರ್ತಿಸುವ ಮೊದಲೇ ರಾಸು ಸತ್ತು ಬೀಳುವುದುಂಟು. ಈ ರೋಗ ಮನುಷ್ಯನಿಗೂ ತಗಲುವುದುಂಟು. ಆಗ ವ್ರಣದ ರೂಪದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಚರ್ಮ ಹದಮಾಡುವವರು, ಕುರಿ ತುಪ್ಪಟ ವಿಂಗಡಿಸುವವರು ಈ ರೋಗಕ್ಕೆ ಗುರಿಯಾಗುತ್ತಾರೆ.

ನೆರಡಿಯಿಂದ ಉಂಟಾದ ಚರ್ಮದ ಗಾಯ

ನೆರಡಿ ಪ್ರಪಂಚದ ಎಲ್ಲ ಕಡೆ ವ್ಯಾಪಿಸಿರುವ ರೋಗ. ಬಹುಪುರಾತನ ಕಾಲದಿಂದಲೂ ಪರಿಚಿತವಾಗಿದೆ. ಆದರೆ ಇದು ಸಾಂಕ್ರಾಮಿಕ ಎಂದು ಗೊತ್ತಾಗಿದ್ದು ಕ್ರಿ.ಶ. 1836ರಲ್ಲಿ. ರಾಬರ್ಟ್ ಕಾಕ್ 1867ರಲ್ಲೂ ಲೂಯಿ ಪಾಶ್ಚರ್ 1877ರಲ್ಲೂ ಈ ರೋಗದ ಕ್ರಿಮಿಯನ್ನು ದೇಹದ ಹೊರಗೆ ಕೃತಕವಾಗಿ ಬೆಳೆಸುವ ವಿಧಾನವನ್ನು ಕಂಡುಹಿಡಿದು ರೋಗನಿರೋಧಕ ಔಷಧಿ ತಯಾರಿಕೆಗೆ ಮಾರ್ಗ ತೋರಿಸಿದರು. ಹೀಗೆ ಬಳಸಲಾಗುವ ಮದ್ದುಗಳಲ್ಲಿ ಮುಖ್ಯವಾದವು ಆಂತ್ರಾಕ್ಸ್ ವ್ಯಾಕ್ಸೀನ್, ಸಪಾನಿನ್ ವ್ಯಾಕ್ಸೀನ್, ಆಂಟಿ-ಅಂತ್ರಾಕ್ಸ್ ಸೀರಮ್ ಮುಂತಾದವು. ಆದರೆ ಈಗೀಗ ಪೆನಿಸಿಲಿನ್ ಬಳಕೆ ಯಶಸ್ವಿಯೆನಿಸಿದೆ.

ರೋಗ ಕಾಣಿಸಿಕೊಂಡ ಮೇಲೆ ಚಿಕಿತ್ಸೆ ನಡೆಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಹೆಚ್ಚು ಉತ್ತಮವೆನಿಸಿದೆ. ಅಂತ್ರಾಕ್ಸ್ ಬ್ಯಾಕ್ಟೀರಿಯಮಿನ ಬೀಜಾಣುಗಳು ಮಣ್ಣಿನಲ್ಲಿ ಯಾವುದೇ ಸೋಂಕುನಿವಾರಕಕ್ಕೆ ಬಗ್ಗದೆ 18 ವರ್ಷಗಳ ಕಾಲ ಬದುಕಿರಬಲ್ಲವು. ಅಲ್ಲದೆ ಇವಕ್ಕೆ ಹೆಚ್ಚು ಶಾಖವನ್ನೂ ತಡೆದುಕೊಳ್ಳಬಲ್ಲ ಸಾಮರ್ಥ್ಯ ಇದೆ. ಜೊತೆಗೆ ಗಾಳಿಗೆ ವಿಷಾಣುಗಳನ್ನು ತೆರೆದಿಟ್ಟಾಗ ಬಲುಬೇಗ ಬೀಜಾಣುಗಳು ರೂಪುಗೊಳ್ಳುತ್ತವಾದ್ದರಿಂದ ನೆರಡಿ ರೋಗದಿಂದ ಸತ್ತ ರಾಸುಗಳನ್ನು ಚರ್ಮ ಸುಲಿಯದೆಯೇ ನೆಲದಲ್ಲಿ 2 ಮೀ. ಆಳದ ಗುಂಡಿಗಳನ್ನು ತೋಡಿ ಸುಟ್ಟ ಸುಣ್ಣದೊಂದಿಗೆ ಹೂಳಿಬಿಡುತ್ತಾರೆ. ರೋಗಪೀಡಿತ ಪ್ರಾಣಿಯ ಸಗಣಿ ಮುಂತಾದ ಎಲ್ಲ ತ್ಯಾಜ್ಯ ವಸ್ತುಗಳನ್ನು ಸುಟ್ಟುಹಾಕಿಬಿಡುವುದಿದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ