ಜಾನ್ ವಾಲಿಸ್

ಗಣಿತಜ್ಞ

ಜಾನ್ ವಾಲಿಸ್ (1616-1703) ಒಬ್ಬ ಇಂಗ್ಲಿಷ್ ಗಣಿತವಿದ. ಅನುಕಲನಶಾಸ್ತ್ರದ ವಿಕಾಸದಲ್ಲಿ ಮಹತ್ತರ ಕಾಣಿಕೆ ನೀಡಿದವನೆಂದು ಪ್ರಸಿದ್ಧ. 1616 ನವೆಂಬರ್ 22ರಂದು ಜನಿಸಿದ. ಐಸಾಕ್ ನ್ಯೂಟನ್ (1642-1727) ಬರುವ ಅದೇ ಮೊದಲ ರಂಗಪ್ರವೇಶಿಸಿದ ಪ್ರತಿಭಾನ್ವಿತ ಗಣಿತಜ್ಞ. ಅನಂತದ ಪ್ರತೀಕ ‘∞’ಯನ್ನು ಗಣಿತಕ್ಕೆ ತಂದವನೇ ಈತ.[೧]

ಜನನ, ವಿದ್ಯಾಭ್ಯಾಸ

ಇಂಗ್ಲೆಂಡಿನಲ್ಲಿ ಕೆಂಟ್‌ನ ಅಶ್‌ಫೋರ್ಡ್ ಈತನ ಹುಟ್ಟೂರು. 15ನೆಯ ವಯಸ್ಸಿನಲ್ಲೇ ಲ್ಯಾಟಿನ್, ಗ್ರೀಕ್, ಹೀಬ್ರೂ, ತರ್ಕಶಾಸ್ತ್ರ ಹಾಗೂ ಹಿರಿಯ ಮಟ್ಟದ ಗಣಿತದಲ್ಲಿ ಪ್ರಾವೀಣ್ಯಗಳಿಸಿ ತಾನು ಓದುತ್ತಿದ್ದ ಫೆಲ್‌ಸ್ಟೆಡ್ ಶಾಲೆಯ ಅಧ್ಯಾಪಕರ ಮೆಚ್ಚಿನ ವಿದ್ಯಾರ್ಥಿಯಾದ.[೨] ಈತ ವೈದ್ಯನಾಗಬೇಕೆಂಬುದು ತಂದೆಯ ಆಸೆ. ಈ ಪ್ರಯುಕ್ತ ಮಗನನ್ನು ಕೇಂಬ್ರಿಜ್‌ನ ಎಮ್ಯಾನ್ಯುಯೆಲ್ ಕಾಲೇಜಿಗೆ ಸೇರಿಸಿದ (1632).[೩] ಮಾನವನಲ್ಲಿ ರಕ್ತಪರಿಚಲನಕ್ರಿಯೆ ಬಗ್ಗೆ ಆಗಷ್ಟೆ ಅಧ್ಯಯನ ಆರಂಭವಾಗಿದ್ದ ಕಾಲವದು. ಈ ಓದಿನ ಜೊತೆಗೇ ತನ್ನ ಮನಮೆಚ್ಚಿದ ಗಣಿತದ ಬಗ್ಗೆ ಹೆಚ್ಚಿನ ಒಲವು ಈತನಿಗೆ. ವಿಲಿಯಮ್ ಔಟ್ರೆಡ್ (1575-1660) ಎಂಬಾತನ ‘ಕ್ಲೇವಿಸ್ ಮ್ಯಾತೆಮೆಟಿಕ’ (ಗಣಿತಾಭ್ಯಾಸಕ್ಕೆ ಕೀಲಿಕೈಗಳು) ಕೃತಿಯಿಂದ ಪ್ರಭಾವಿತನಾಗಿ ಗಣಿತ ಲೋಕಕ್ಕೆ ತನ್ನನು ಸಮರ್ಪಿಸಿಕೊಳ್ಳಲು ಆದ್ಯ ಅರ್ಪಣೆ ಎಂದು ನಿರ್ಧರಿಸಿದ.

ವೃತ್ತಿಜೀವನ, ಸಾಧನೆಗಳು

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಜ್ಯಾಮಿತಿಯ `ಸವಿಲಿಯನ್ ಪೀಠ’ಕ್ಕೆ ಪ್ರೊಫೆಸರನಾಗಿ ನೇಮಕ (1649). ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ತರ್ಕಶಾಸ್ತ್ರಗಳಲ್ಲಿಯೂ ಇವನಿಗೆ ಅಪಾರ ಆಸಕ್ತಿ. ಕಿವುಡ-ಮೂಕರಿಗೆ ಒಂದು ವಿಶಿಷ್ಟ ಬೋಧನಾ ಸಲಕರಣೆ ಸಿದ್ಧಪಡಿಸಿದ ಮೊದಲಿಗನೀತ.[೪]

ರೆನೆ ಡೇಕಾರ್ಟೇ (1596-1650) ಪ್ರಕಟಿಸಿದ್ದ ವಿಶ್ಲೇಷಣಾತ್ಮಕ ಜ್ಯಾಮಿತಿ (ಅನಲಿಟಿಕಲ್ ಜಾಮೆಟ್ರಿ) ಸಮಕಾಲೀನ ವಿದ್ವಾಂಸರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಈತ ಬರೆದ ಶಂಕು ವೇದಗಳು ಅಥವಾ ಶಂಕುಜಗಳು (ಕಾನಿಕ್ ಸೆಕ್ಷನ್ಸ್) ಪ್ರಬಂಧಗಳು ಡೇಕಾರ್ಟೇಯನ್ನು ಸಾಮಾನ್ಯ ಗಣಿತಜ್ಞರಿಗೆ ಅರ್ಥಮಾಡಿಸುವಲ್ಲಿ ಬಲು ಸಹಕಾರಿಯಾದುವು. ಶಂಕುಜಗಳು ಎರಡು ಆಯಾಮಗಳ ವಕ್ರರೇಖೆಗಳೆಂಬ ವ್ಯಾಖ್ಯೆ ಪಡೆದುವು. ಈತನ ಹೊಸರೀತಿಯ ಮಾರ್ಗ/ಸಾಧನೆಗಳಿಂದ ಶಂಕುಜಗಳು ಈಗ ಬಳಕೆಯಲ್ಲಿರುವಂತೆ ಮಾರ್ಪಾಡುಗೊಂಡುವು.

ಈತನ ಅತಿಪ್ರಮುಖ ಕೃತಿ ‘ಅರಿತ್‌ಮೆಟಿಕ ಇನ್ಫಿನಿಟೋರಮ್’ 1656 ರಲ್ಲಿ ಪ್ರಕಟವಾಯಿತು. ಡೇಕಾರ್ಟೇ ಮತ್ತು ಕವೆಲಿರಿ ಅವರ ವಿಧಾನಗಳನ್ನು ಈತ ವ್ಯವಸ್ಥಿತವಾಗಿ ವಿಶ್ಲೇಷಣೆಮಾಡಿ ವಿಶದೀಕರಿಸಿದ. ಗಣಿತದಲ್ಲಿ ಋಣ ಮತ್ತು ಅಪೂರ್ಣಾಂಕ ಘಾತಗಳ (powers - exponents) (ಉದಾಹರಣೆಗೆ:  , ...) ಇತ್ಯಾದಿ ಬಳಕೆಗೆ ಹೊಸ ಅಂಕನವಿಧಾನ ರೂಪಿಸಿದ. ಅವಿಭಾಜ್ಯಗಳ ವಿಧಾನದಿಂದ ವಕ್ರಾಕೃತಿ y=xm ಮತ್ತು x-ಅಕ್ಷ (x-axis) ಮತ್ತು ಊರ್ಧ್ವಾಕ್ಷ (ordinate) x=h ನ ನಡುವಿನ ಸಲೆಯನ್ನು ಲೆಕ್ಕಿಸುವ ವಿಧಾನವನ್ನು ಶೋಧಿಸಿದ. ಇವನ ‘ಮ್ಯಾಥೆಸಿಸ್ ಯೂನಿವರ್ಸಲಿಸ್’ ಕೃತಿಯ ಮೂಲಕ ಬೀಜಗಣಿತ, ಅಂಕಗಣಿತ ಮತ್ತು ಜ್ಯಾಮಿತಿಯ ಇನ್ನೂ ಹಲವಾರು ಅಂಕನಗಳನ್ನು ಪರಿಚಯಿಸಿದ (1657). ಈ ಸಂದರ್ಭದಲ್ಲೇ ಅನಂತದ ಚಿಹ್ನೆ ∞ ಕೂಡ ಬೆಳಕಿಗೆ ಬಂತು. ಈತನ ‘ಅರಿತ್‌ಮೆಟಿಕ ಇನ್ಫಿನಿಟೋರಮ್’ ಕೃತಿಯನ್ನು ನ್ಯೂಟನ್ ತನ್ನ ಶಾಲಾ ಅವಧಿಯಲ್ಲಿ ಶ್ರದ್ಧೆಯಿಂದ ಅಭ್ಯಸಿಸಿದುದನ್ನೂ ಅದು ತನ್ನ ದ್ವಿಪದ ಪ್ರಮೇಯ (ಬೈನಾಮಿಯಲ್ ತೀಯರಮ್) ಮತ್ತು ‘ಅನುಕಲನಶಾಸ್ತ್ರ’ಗಳನ್ನು ರೂಪಿಸಲು ಬಹಳ ಉಪಯೋಗವಾಯಿತೆಂಬುದನ್ನೂ ಉಲ್ಲೇಖಿಸಿದ್ದಾನೆ. ಇದು ಈತನ ಹಿರಿಮೆಗೆ ಸಾಕ್ಷಿ. ಸಂತತ ಅಪೂರ್ಣಾಂಕಗಳ ರಚನೆ ಮತ್ತು ಗುಣಲಕ್ಷಣಗಳ ಬಗ್ಗೆ ಇವನ ವ್ಯಾಖ್ಯೆಗೆ ಮಹತ್ತ್ವದ ಸ್ಥಾನ ಇದೆ.

ಈತ ರಾಯಲ್ ಸೊಸೈಟಿಯಲ್ಲಿ ಮೊತ್ತಮೊದಲಾಗಿ ಅಸಮಗ್ರ ಸ್ಥಿತಿಸ್ಥಾಪಕತ್ವ ಸ್ಥಿತಿಯಲ್ಲಿಯ ‘ಸಂಘಟನೆಯ ತತ್ತ್ವಗಳು’ ವಿಷಯಮಂಡನೆ ಮಾಡಿದ (1668). ವಸ್ತುಗಳ ಗುರುತ್ವ ಕೇಂದ್ರ ಮತ್ತು ಗತಿವಿಜ್ಞಾನ ಕುರಿತು ಸಂವೇಗ ಸಂರಕ್ಷಣೆ (conservation of momentum) ನಿಯಮಗಳ ಬಗ್ಗೆ ಮಹತ್ತ್ವದ ನಿಲವನ್ನು ಮಂಡಿಸಿದ. ಮಿಶ್ರಸಂಖ್ಯೆಗಳ ಪ್ರಾಥಮಿಕ ಪ್ರಸ್ತಾವನೆ ಒಳಗೊಂಡ ಟ್ರೀಟೈಸ್ ಆನ್ ಆಲ್ಜಿಬ್ರ ಗ್ರಂಥವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ (1685). ಅನಂತಾಲ್ಪಗಳನ್ನು (ಇನ್ಫಿನಿಟೆಸಿಮಲ್ಸ್) ಒಳಗೊಂಡ ಸಮಸ್ಯೆಗಳಿಗೆ ಸಾಮಾನ್ಯ ಜ್ಯಾಮಿತಿ ವಿಧಾನಗಳಿಂದ ಹೊರತಾದ ಬೀಜಗಣಿತ ವಿಧಾನಗಳ ಬಳಕೆ ಮೂಲಕ ಅವಕಲನ ಮತ್ತು ಅನುಕಲನಗಳ ವಿಧಾನಕ್ಕೆ ಹಾದಿ ಕಡಿದ ಖ್ಯಾತಿ ಈತನದು.

ಮರಣ

ಈತ 1703 ಅಕ್ಟೋಬರ್ 28ರಂದು ನಿಧನನಾದ.

ಉಲ್ಲೇಖಗಳು

ಹೊರಗಿನ ಕೊಂಡಿಗಳು


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ