ಘನಶ್ಯಾಮ ದಾಸ್ ಬಿರ್ಲಾ

ಘನಶ್ಯಾಮ ದಾಸ್ ಬಿರ್ಲಾ (ಏಪ್ರಿಲ್ ೯, ೧೮೯೪ - ಜೂನ್ ೧೧. ೧೯೮೩) ಭಾರತೀಯ ಕೈಗಾರಿಕೋದ್ಯಮಿಯಾಗಿ ಮಹಾನ್ ಸಾಧನೆ ಮಾಡಿದವರಾಗಿದ್ದಾರೆ. ಇಂದು ಬಿರ್ಲಾ ವ್ಯಾಪಾರ ಸಮೂಹ ಸಾಧಿಸಿರುವ ಅಪಾರ ಪ್ರಗತಿಗೆ ಘನಶ್ಯಾಮ ದಾಸ್ ಬಿರ್ಲಾ ಅವರು ನೀಡಿದ ಬೆನ್ನೆಲುಬು ಅಪ್ರತಿಮವಾದದ್ದು.[೧]

ಘನಶ್ಯಾಮ ದಾಸ್ ಬಿರ್ಲಾ
ಜನನಏಪ್ರಿಲ್ ೯. ೧೮೯೪
ರಾಜಾಸ್ಥಾನದ ಪಿಲಾನಿ
ಮರಣಜೂನ್ ೧೧, ೧೯೮೩
ವೃತ್ತಿಕೈಗಾರಿಕೋದ್ಯಮಿ

ಬಿರ್ಲಾ ಕುಟುಂಬ

ಭಾರತದ ಕೈಗಾರಿಕ ಕ್ಷೇತ್ರ, ಸ್ವಾತಂತ್ರ್ಯ ಹೋರಾಟ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಘನಶ್ಯಾಮ ದಾಸ ಬಿರ್ಲಾ ಅವರು ಏಪ್ರಿಲ್ ೧೦, ೧೮೯೪ರಂದು ರಾಜಾಸ್ಥಾನದ ಮರುಭೂಮಿಯ ಮಧ್ಯದಲ್ಲಿನ ಪಿಲಾನಿ ಎಂಬಲ್ಲಿ ಜನಿಸಿದರು. ಇವರು ಜಿ.ಡಿ. ಬಿರ್ಲಾ ಎಂದೇ ಉದ್ಯಮಲೋಕದಲ್ಲಿ ಪ್ರಖ್ಯಾತರು. ಒಂದು ಕಾಲದಲ್ಲಿ ಈ ಕುಟುಂಬ ಅಡಮಾನವಿಟ್ಟುಕೊಂಡು ಸಾಲ ನೀಡುವ ವ್ಯವಹಾರ ನಡೆಸುತ್ತಿತ್ತು. ಜಿ ಡಿ ಬಿರ್ಲಾ ಅವರ ತಾತ ಶಿವ ನಾರಾಯಣ ಬಿರ್ಲಾ ಅವರು ಈ ಕೌಟುಂಬಿಕ ವ್ಯವಹಾರದ ಹಾದಿಯನ್ನು ಬದಲಾಯಿಸಿದರು. ಅವರು ಪಿಲಾನಿಯಿಂದ ಮುಂಬೈಗೆ ಬಂದು ಹತ್ತಿ ವ್ಯಾಪಾರವನ್ನು ಪ್ರಾರಂಭಿಸಿದರು. ಈ ವ್ಯವಹಾರದಲ್ಲಿ ಯಶಕಂಡ ಅವರು ಪಿಲಾನಿಗೆ ಹಿಂದಿರುಗಿ ದೊಡ್ಡದೊಂದು ಸೌಧವನ್ನು ಕಟ್ಟಿದರು. ಅದು ‘ಬಿರ್ಲಾ ಹವೇಲಿ’ ಎಂಬ ಹಸಿರಿನಿಂದ ಇಂದು ಕೂಡಾ ಪ್ರಖ್ಯಾತವಾಗಿ ನಿಂತಿದೆ. ಜಿ ಡಿ ಬಿರ್ಲಾರ ತಂದೆ ಬಾಲದೇವದಾಸ್ ಬಿರ್ಲಾ ಅವರು ಕೂಡಾ ಯಶಸ್ವೀ ಉದ್ದಿಮೆದಾರರಾಗಿ ಹೆಸರು ಮಾಡಿದರು.

ವ್ಯವಹಾರದ ವ್ಯಾಪಕತೆ

ಘನಶ್ಯಾಮದಾಸ ಬಿರ್ಲಾ ಅವರು ತಮ್ಮ ಕುಟುಂಬದ ವ್ಯವಹಾರವನ್ನು ಮುಂದುವರೆಸಿದ್ದು ಮಾತ್ರವಲ್ಲದೆ ಅದನ್ನು ವಿವಿಧ ಕ್ಷೇತ್ರಗಳಿಗೆ ವ್ಯಾಪಕಗೊಳಿಸಿದರು. ಕಲ್ಕತ್ತೆಗೆ ಬಂದ ಅವರು ಗೋಣಿ ನಾರಿನ (Jute firm)ಕಾರ್ಖಾನೆ ಪ್ರಾರಂಭಿಸಿದರು. ಆ ಕಾಲದಲ್ಲಿ ಗೋಣಿ ವ್ಯವಹಾರದ ಸ್ವಾಮ್ಯವೆಲ್ಲಾ ಬ್ರಿಟಿಷ್ ಮತ್ತು ಸ್ಕಾಟಿಷ್ ಜನರದ್ದಾಗಿದ್ದು ಈ ಜನ ಜಿ ಡಿ ಬಿರ್ಲಾ ಅವರು ಈ ವ್ಯವಹಾರಕ್ಕೆ ಬಂದಾಗ ಬಹಳಷ್ಟು ಕಿರುಕುಳಗಳನ್ನು ನೀಡಲಾರಂಭಿಸಿದರು. ಇದನ್ನೆಲ್ಲಾ ಜಿ ಡಿ ಬಿರ್ಲಾ ಸಮರ್ಥವಾಗಿ ತಾಳಿಕೊಂಡರು. ಮೊದಲ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಇಡೀ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗೋಣಿ ಉತ್ಪನ್ನಗಳ ಲಭ್ಯತೆಯಲ್ಲಿ ತೊಂದರೆ ಉಂಟಾದ ಸಂದರ್ಭದಲ್ಲಿ ಬಿರ್ಲಾ ಅವರ ಈ ಉದ್ಯಮ ಉತ್ತುಂಗಕ್ಕೇರಿತು.

1919ರಲ್ಲಿ ಬಿರ್ಲಾ ಅವರು 50 ಲಕ್ಷ ರೂಪಾಯಿಗಳ ಹೊಡಿಕೆಯೊಂದಿಗೆ ಬಿರ್ಲಾ ಬ್ರದರ್ಸ್ ಲಿಮಿಟೆಡ್ ಸಂಸ್ಥೆಯನ್ನು ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಗ್ವಾಲಿಯರಿನಲ್ಲಿ ಒಂದು ಗಿರಣಿ ಕೂಡಾ ಪ್ರಾರಂಭಗೊಂಡಿತು.

1926ರಲ್ಲಿ ಜಿ ಡಿ ಬಿರ್ಲಾ ಅವರು ಬ್ರಿಟಿಷ್ ಭಾರತದ ಕೇಂದ್ರೀಯ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಆಯ್ಕೆಗೊಂಡರು.

1930ರಲ್ಲಿ ಜಿ.ಡಿ. ಬಿರ್ಲಾ ಅವರು ಸಕ್ಕರೆ ಮತ್ತು ಕಾಗದದ ಕಾರ್ಖಾನೆಗಳನ್ನು ಸ್ಥಾಪಿಸಿದರು.

1940ರಲ್ಲಿ ಕಾರುಗಳ ಉತ್ಪಾದನೆಯಲ್ಲೂ ತೊಡಗಿಕೊಂಡ ಘನಶ್ಯಾಮದಾಸ್ ಬಿರ್ಲಾ ಅವರು ಹಿಂದೂಸ್ಥಾನ್ ಮೋಟಾರ್ಸ್ ಸಂಸ್ಥೆಯನ್ನು ಹುಟ್ಟುಹಾಕಿದರು. ಸ್ವಾತಂತ್ರ್ಯಾನಂತರದಲ್ಲಿ ಚಹಾ ಮತ್ತು ಹತ್ತಿ ಉದ್ಯಮದಲ್ಲಿ ಹೂಡಿಕೆ ಮಾಡಿದ ಬಿರ್ಲಾ ಅವರು ಹಿಂದಿನ ಹಲವಾರು ಐರೋಪ್ಯ ಕಂಪೆನಿಗಳನ್ನು ಕೊಂಡುಕೊಳ್ಳುವುದಕ್ಕೆ ಮುಂದಾದರು. ಜೊತೆಗೆ ಸಿಮೆಂಟ್, ರಾಸಾಯನಿಕಗಳು, ರೇಯಾನ್ ಮತ್ತು ಸ್ಟೀಲ್ ಟ್ಯೂಬುಗಳ ಕ್ಷೇತ್ರಕ್ಕೂ ತಮ್ಮ ವ್ಯವಹಾರವನ್ನು ವಿಸ್ತರಿಸಿದರು.

1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಭಾರತೀಯವಾದಂತಹ ವ್ಯಾವಹಾರಿಕವಾದ ಬ್ಯಾಂಕ್ ಒಂದನ್ನು ತೆರೆಯಬೇಕೆಂಬ ಇಂಗಿತ ಹೊಂದಿದ ಜಿ ಡಿ. ಬಿರ್ಲಾ ಅವರು 1943ರಲ್ಲಿ ಯುನೈಟೆಡ್ ಕಮರ್ಶಿಯಲ್ ಬ್ಯಾಂಕ್ ಅನ್ನು ಸ್ಥಾಪಿಸಿದರು. ಇಂದು ಸರ್ಕಾರಿ ಸ್ವಾಮ್ಯದಲ್ಲಿ ಯೂಕೋ ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಈ ಸಂಸ್ಥೆಯು ಭಾರತದ ಪ್ರಮುಖ ಬ್ಯಾಂಕುಗಳ ಸಾಲಿಗೆ ಸೇರಿದೆ.

ಶಿಕ್ಷಣ ಸಂಸ್ಥೆಗಳು

ತಮ್ಮ ಊರಿನಲ್ಲಿ ಮೂಲಭೂತ ಅವಶ್ಯಕತೆಗಳ ಅಭಿವೃದ್ಧಿಯ ಕಡೆಗೆ ತೀವ್ರವಾಗಿ ಗಮನ ಹರಿಸಿದ ಜಿ. ಡಿ. ಬಿರ್ಲಾ ಅವರು ಪಿಲಾನಿಯಲ್ಲಿ ಬಿರ್ಲಾ ಇಂಜಿನಿಯರಿಂಗ್ ಕಾಲೇಜು ಮತ್ತು ಭಿವಾನಿ ಎಂಬಲ್ಲಿ ಟೆಕ್ನಾಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ಸ್ಟೈಲ್ ಅಂಡ್ ಸೈನ್ಸಸ್ ವಿದ್ಯಾಸಂಸ್ಥೆಗಳನ್ನು ೧೯೪೩ರಲ್ಲಿ ಪ್ರಾರಂಭಿಸಿದರು. ಈ ವಿದ್ಯಾಸಂಸ್ಥೆಗಳು ಮುಂದಿನ ದಿನಗಳಲ್ಲಿ ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾಗಿ ಪ್ರಖ್ಯಾತಗೊಂಡಿವೆ. ಇದಲ್ಲದೆ ರಾನಿಕೇತ್ ಎಂಬಲ್ಲಿರುವ ಜಿ ಡಿ ಬಿರ್ಲಾ ಮೆಮೋರಿಯಲ್ ಶಾಲೆಯು ಭಾರತದ ಪ್ರತಿಷ್ಠಿತ ವಸತಿಶಾಲೆಗಳಲ್ಲಿ ಒಂದೆಂದು ಪ್ರಖ್ಯಾತವಾಗಿದೆ.

ಗೌರವಗಳು

೧೯೫೭ರ ವರ್ಷದಲ್ಲಿ ಜಿ ಡಿ. ಬಿರ್ಲಾ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಾತ್ಮರ ಒಡನಾಡಿ

ಮಹಾತ್ಮ ಗಾಂಧೀಜಿಯವರ ಆಪ್ತರಾಗಿದ್ದ ಜಿ ಡಿ ಬಿರ್ಲಾ ಅವರು ಗಾಂಧೀಜಿಯವರನ್ನು ಮೊದಲ ಬಾರಿಗೆ ೧೯೧೬ರ ವರ್ಷದಲ್ಲಿ ಭೇಟಿಯಾದರು. ಮಹಾತ್ಮ ಗಾಂಧಿಯವರ ಜೊತೆಯಲ್ಲಿ ಬ್ರಿಟಿಷರೊಂದಿಗೆ ಪ್ರಥಮ ಮತ್ತು ದ್ವಿತೀಯ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಂಡಿದ್ದ ಶ್ರೇಯಸ್ಸು ಕೂಡಾ ಜಿ. ಡಿ. ಬಿರ್ಲಾ ಅವರದಾಗಿತ್ತು. ನವದೆಹಲಿಯ ‘ಬಿರ್ಲಾ ಹೌಸ್’ ಹೊತ್ತಿಸಿದ ದೀಪಗಳು ಬ್ರಿಟಿಶ್ ಸಾಮ್ರಾಜ್ಯದ ಅಸ್ತಮಾನವನ್ನು ಕಾಣಿಸುವಲ್ಲಿ ಶ್ಲಾಘನೀಯವಾದ ಕಾರ್ಯವನ್ನು ನಡೆಸಿದ್ದು ಇತಿಹಾಸದ ಪುಟಗಳಲ್ಲಿ ನಿಚ್ಚಳವಾಗಿ ದಾಖಲಾಗಿದೆ. ೧೯೪೮ರ ವರ್ಷದಲ್ಲಿ ಮಹಾತ್ಮರು ತಾವು ಪ್ರಾಣಾರ್ಪಣೆ ಮಾಡಿದ ಸಂದರ್ಭದಲ್ಲಿ ಸಹಾ ಬಿರ್ಲಾ ಹೌಸಿನಲ್ಲಿದ್ದರು. ಅವರ ತಮ್ಮ ಜೀವನದ ಕಡೆಯ ನಾಲ್ಕು ತಿಂಗಳುಗಳನ್ನು ಬಿರ್ಲಾರವರ ಈ ನಿವಾಸದಲ್ಲಿ ಕಳೆದರು.

ಜಿ ಡಿ. ಬಿರ್ಲಾ ಅವರ ಸಾಧನೆ ಬಿರ್ಲಾ ಸಂಸ್ಥೆಯನ್ನು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ಭಾರತದ ಪ್ರಥಮ ದಶಕದಲ್ಲಿನ ಪ್ರಮುಖ ಸಂಸ್ಥೆಯನ್ನಾಗಿಸಿತು. ಈ ಸಾಧನೆಯನ್ನು ಅವರ ಮುಂದಿನ ತಲೆಮಾರಾದ ದಿವಂಗತ ಆದಿತ್ಯ ಬಿರ್ಲಾ ಅವರು ಸಮರ್ಥವಾಗಿ ಮುಂದುವರೆಸಿದ್ದರು. ಇಂದು ಕೂಡಾ ಈ ಸಂಸ್ಥೆ ತನ್ನ ಮಹತ್ವದ ಸ್ಥಾನವನ್ನು ಮುಂದುವರೆಸಿಕೊಂಡು ನಡೆದಿದೆ.

ಸ್ಮಾರಕ

ಘನಶ್ಯಾಮ ದಾಸ ಬಿರ್ಲಾ ಅವರು ಜೂನ್ ೧೧, ೧೯೮೩ರ ವರ್ಷದಲ್ಲಿ ತಮ್ಮ ತೊಂಬತ್ತನೇ ವಯಸ್ಸಿನಲ್ಲಿ ನಿಧನರಾದರು. ಲಂಡನ್ನಿನ ಹೂಪ್ ಲೇನಿನಲ್ಲಿರುವ ಗೋಲ್ಡರ್ಸ್ ಗ್ರೀನ್ ಕ್ರಿಮೆಟೋರಿಯಂ ಎಂಬಲ್ಲಿ ಘನ ಶ್ಯಾಮ ದಾಸ್ ಬಿರ್ಲಾ ಅವರ ಬೃಹತ್ ಸ್ಮಾರಕವನ್ನು ಇರಿಸಲಾಗಿದೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ