ಕ್ಷಮಾದಾನ

ಕ್ಷಮಾದಾನವು ರಾಜಕೀಯ ಮೊದಲಾದ ಯಾವುದೇ ರೀತಿಯ ಅಪರಾಧಗಳಿಗೆ ನ್ಯಾಯಾಲಯಗಳು ಶಿಕ್ಷೆ ವಿಧಿಸಿದಾಗ ರಾಷ್ಟ್ರದ ಸರ್ವೋಚ್ಚ ಅಧಿಕಾರಿ ಶಿಕ್ಷೆಯನ್ನು ರದ್ದುಪಡಿಸುವ ಕ್ರಮ (ಆಮ್ನೆಸ್ಟಿ).

ದ್ವೇಷೋದ್ರೇಕ ಭಾವನೆಗಳನ್ನು ಉಪಶಮನಮಾಡಿ, ಅಪರಾಧಿಗಳ ಮನಃ ಪರಿವರ್ತನೆ ಮಾಡುವುದರ ಮೂಲಕ ದೇಶದಲ್ಲಿ ಅಥವಾ ದೇಶಗಳಲ್ಲಿ ಮಾಮೂಲು ಸ್ಥಿತಿಯನ್ನು ಏರ್ಪಡಿಸುವುದಕ್ಕೋಸ್ಕರ ಕ್ಷಮಾದಾನವನ್ನು ನೀಡುವ ಸಂಪ್ರದಾಯ ಎಲ್ಲ ರಾಷ್ಟ್ರಗಳಲ್ಲೂ ಆಚರಣೆಯಲ್ಲಿದೆ.

ರಾಜಕೀಯ ಅಪರಾಧಗಳು

ವಿಶ್ವದ ರಾಷ್ಟ್ರಗಳಲ್ಲಿ ಬಹುತೇಕ ರಾಷ್ಟ್ರಗಳು ಸ್ವತಂತ್ರವಾದ ಮತ್ತು ಪರಮಾಧಿಕಾರವುಳ್ಳ ರಾಷ್ಟ್ರಗಳಾಗಿವೆ. ಆಂತರಿಕ ಮತ್ತು ವಿದೇಶಾಂಗ ವ್ಯವಹಾರ ರಾಷ್ಟ್ರಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ. ರಾಜ್ಯದೊಳಗಿರುವ ಸಂಘಸಂಸ್ಥೆಗಳೂ ಜನರೂ ಒಳಪಟ್ಟಿರುವುದು. ಸರ್ಕಾರದ ಪರಮಾಧಿಕಾರಕ್ಕೆ ಆದ್ದರಿಂದ ರಾಷ್ಟ್ರದ ಮೂಲಶಾಸನವಾದ ಸಂವಿಧಾನವನ್ನೂ ಪ್ರಾದೇಶಿಕ ಸಮಗ್ರತೆಯನ್ನೂ ಪರಮಾಧಿಕಾರವನ್ನೂ ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಯಾರಾದರೂ ಆಕ್ರಮವಾದ ವಿಧಾನಗಳಿಂದ ರಾಷ್ಟ್ರದ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ಪ್ರಯತ್ನ ಮಾಡಿದರೆ, ಆ ಪ್ರಯತ್ನವನ್ನು ವಿಫಲಗೊಳಿಸಿ ರಾಷ್ಟ್ರವ್ಯವಸ್ಥೆಯನ್ನು ಕಾಪಾಡುವ ಅಧಿಕಾರ ಪರಮಾಧಿಕಾರದ ವ್ಯಾಪ್ತಿಗೆ ಸೇರಿದೆ. ಆದ್ದರಿಂದ ರಾಷ್ಟ್ರವಿದ್ರೋಹ ಕಾರ್ಯಗಳು, ಸಶಸ್ತ್ರದಂಗೆಗಳು, ಅಂತರ್ಯುದ್ಧಗಳು ಇತ್ಯಾದಿ ಕಾರ್ಯಚಟುವಟಿಕೆಗಳನ್ನು ದಮನಮಾಡುವ ಅಧಿಕಾರ ರಾಷ್ಟ್ರಕ್ಕಿದೆ. ಈ ಕಾರ್ಯಗಳಲ್ಲಿ ತೊಡಗಿದವರನ್ನು ಶಿಕ್ಷಿಸುವ ಅಧಿಕಾರವೂ ರಾಷ್ಟ್ರಕ್ಕಿದೆ. ಈ ವಿಧವಾದ ಅಪರಾಧಗಳನ್ನು ರಾಜಕೀಯ ಅಪರಾಧಗಳೆಂದು ಪರಿಗಣಿಸಲಾಗಿದೆ.

ಕ್ಷಮಾದಾನ

ರಾಷ್ಟ್ರವಿದ್ರೋಹಕಾರಿ ಕೃತ್ಯಗಳಿಂದ ಉಂಟಾದ ಅಶಾಂತಿಯನ್ನು ಉಪಶಮನ ಮಾಡುವುದಕ್ಕಾಗಿ, ಜನರಲ್ಲಿ ಉಂಟಾದ ದ್ವೇಷೋದ್ರೇಕ ಭಾವನೆಗಳನ್ನು ಹೋಗಲಾಡಿಸುವುದಕ್ಕಾಗಿ, ಯಥಾಸ್ಥಿತಿಯನ್ನು ಪುನಃ ಸ್ಥಾಪಿಸುವುದಕ್ಕಾಗಿ, ರಾಜಕೀಯ ಅಪರಾಧಗಳಲ್ಲಿ ತೊಡಗಿದ್ದವರು ಎಸಗಿದ ಪೂರ್ವಾಪರಾಧಗಳನ್ನು ಮರೆಸುವುದಕ್ಕಾಗಿ ಮತ್ತು ಜನರೆಲ್ಲರೂ ಪುನಃ ಅನ್ಯೋನ್ಯ ಸಂಬಂಧದಿಂದ ಜೀವಿಸುವಂತೆ ಮಾಡುವ ಸಲುವಾಗಿ ಅಪರಾಧಿಗಳಿಗೆ ಕ್ಷಮಾದಾನ ನೀಡುವುದೂ ಉಂಟು. ಇತರ ಬಗೆಯ ಅಪರಾಧಿಗಳಿಗೂ ಕೆಲವೊಮ್ಮೆ ಕ್ಷಮಾದಾನ ನೀಡಲಾಗುತ್ತದೆ. ಕ್ಷಮಾದಾನದ ಮೂಲಕ ಅಪರಾಧಿಯ ಮನಸ್ಸನ್ನು ಪರಿವರ್ತನೆ ಮಾಡಬಹುದು.

ಕೆಲವು ನಿದರ್ಶನಗಳು

  • ಇಂಗ್ಲೆಂಡಿನ ದೊರೆಯಾಗಿದ್ದ ೨ನೆಯ ಚಾರ್ಲ್ಸ್ ತನ್ನ ತಂದೆಯನ್ನು ವಧೆ ಮಾಡಿದವರು ಮತ್ತು ಇತರ ಕೆಲವರನ್ನು ಬಿಟ್ಟು, ಆ ಘಟನೆಯಲ್ಲಿ ಭಾಗವಹಿಸಿದ ಉಳಿದವರಿಗೆಲ್ಲ ಸು.1660ರಲ್ಲಿ ಕ್ಷಮಾದಾನ ನೀಡಿದ.
  • ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಆಂಡ್ರ್ಯೂ ಜಾನ್‍ಸನ್, ಸಂಯುಕ್ತವ್ಯವಸ್ಥೆಯ ವಿರುದ್ಧ ಬಂಡಾಯವೆದ್ದಿದ್ದ ಸಹಾಪರಾಧಿಗಳಿಗೆ ಸಂಯುಕ್ತಸಂಸ್ಥಾನ ಸಂವಿಧಾನಕ್ಕೆ ನಿಷ್ಠೆಯಿಂದ ನಡೆದುಕೊಳ್ಳುವ ಪ್ರಮಾಣವಚನದ ಆಧಾರದ ಮೇಲೆ 1865ರಲ್ಲಿ ಕ್ಷಮಾದಾನ ನೀಡಿದ.
  • ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಯೂಬ್ ಖಾನನ ವಿರುದ್ಧ ಬಂಡಾಯವೆದ್ದು ಅಧಿಕಾರದ ಬದಲಾವಣೆಗೆ ಕಾರಣರಾದ ರಾಜಕಾರಣಿಗಳಿಗೆ ಅಧ್ಯಕ್ಷ ಯಾಹ್ಯಾಖಾನ್ ಕ್ಷಮಾದಾನ ನೀಡಿದ್ದ.
  • ನಾಗಾ ಮತ್ತು ಮಿಜೋ ದಂಗೆಕೋರರಿಗೆ ಭಾರತ ಸರ್ಕಾರ ಕ್ಷಮಾದಾನ ನೀಡಿತು.

ಒಪ್ಪಂದಗಳಲ್ಲಿ ಕ್ಷಮಾದಾನ

ಯುದ್ಧಕಾಲದಲ್ಲಿ ಪರರಾಷ್ಟ್ರಗಳೊಡನೆ ಸೇರಿಕೊಂಡು ಶತ್ರುಗಳಿಗೆ ಸಹಾಯ ಮತ್ತು ಸಹಕಾರ ನೀಡುವ ನಾಗರಿಕರು ಮತ್ತು ಶರಣಾರ್ಥಿಗಳಾದ ಸಶಸ್ತ್ರದಳಗಳವರಿಗೆ ಕ್ಷಮಾದಾನ ನೀಡುವುದಕ್ಕೆ ಸಂಬಂಧಿಸಿದ ಉಪವಿಧಿಗಳು ಸಾಮಾನ್ಯವಾಗಿ ಎಲ್ಲ ಶಾಂತಿ ಒಪ್ಪಂದಗಳಲ್ಲೂ ಇರುವುದುಂಟು. ಈ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳ ಅನಂತರ ರಾಷ್ಟ್ರಗಳು ಸಹಿ ಹಾಕಿದ ಶಾಂತಿ ಒಪ್ಪಂದಗಳಲ್ಲಿ ಈ ರೀತಿಯ ಉಪವಿಧಿಗಳು ಕಾಣಬರುವುದಿಲ್ಲ. ಎರಡು ಅಥವಾ ಅನೇಕ ರಾಷ್ಟ್ರಗಳು ಸೇರಿ ಮಾಡಿಕೊಂಡ ಒಪ್ಪಂದಗಳ ಮೂಲಕ ಈ ರೀತಿಯ ಕ್ಷಮಾದಾನವನ್ನು ನೀಡಲಾಗುತ್ತಿತ್ತು ಎಂಬುದಕ್ಕೆ ಈ ಕೆಳಕಂಡ ನಿದರ್ಶನಗಳನ್ನು ಕೊಡಬಹುದು:

ಕ್ರಿ.ಪೂ.404ರಲ್ಲಿ 30 ಜನ ನಿರಂಕುಶಾಧಿಕಾರಿಗಳ ದಬ್ಬಾಳಿಕೆಯನ್ನು ಸದೆಬಡಿದ ಅನಂತರ ಅಥೆನ್ಸ್ ನ ಥ್ರ್ಯಾಸಿಬ್ಯೂಲಸ್ ಆ ಮೂವತ್ತು ಜನರನ್ನು ಬಿಟ್ಟು ಉಳಿದವರಿಗೆಲ್ಲ ಕ್ಷಮಾದಾನ ನೀಡಿದ. ರೋಮನ್ ಚಕ್ರಾಧಿಪತ್ಯದ ಕಾಲದಲ್ಲೂ ಕ್ಷಮಾದಾನ ನೀಡುವುದಕ್ಕೆ ಪೋಷಕವಾದ ಕಾನೂನು ತತ್ತ್ವಗಳಿದ್ದುವು. ಆಧುನಿಕ ಯುಗದಲ್ಲಿ 1815ರ ವಿಯೆನ್ನ ಒಪ್ಪಂದದ ವಿಧಿಗಳಿಂದಾಗಿ ಪೋಲಿಷ್ ಮತ್ತು ಸ್ವೀಡಿಷ್ ಜನರಿಗೆ ಕ್ಷಮಾದಾನ ದೊರೆಯಿತು. 1871ರ ಫ್ರಾಂಕ್‍ಫರ್ಟ್ ಒಪ್ಪಂದದ ವಿಧಿಗಳಿಂದಾಗಿ ಜರ್ಮನಿಗೆ ಫ್ರಾನ್ಸ್ ವರ್ಗಾಯಿಸಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ಕ್ಷಮಾದಾನ ದೊರೆಯಿತು. 1878ರಲ್ಲಿ ರಷ್ಯ ಮತ್ತು ತುರ್ಕಿ ಮಾಡಿಕೊಂಡ ಸ್ಯಾನ್‍ಸ್ಟಿಫ್ಯಾನೋ ಒಪ್ಪಂದದ ನಿಯಮಗಳಿಂದಾಗಿ ಸಹ ಯುದ್ಧದಲ್ಲಿ ರಷ್ಯದ ಪರವಾಗಿದ್ದ ತುರ್ಕಿ ಜನರಿಗೆ ಕ್ಷಮಾದಾನ ದೊರೆಯಿತು. 1902ರ ಬೋಯರ್ ಒಪ್ಪಂದದಲ್ಲಿ ದಕ್ಷಿಣ ಆಫ್ರಿಕದಲ್ಲಿ ಬೋಯರ್ ಜನರಿಗೆ ಕ್ಷಮಾದಾನ ನೀಡುವುದಕ್ಕೆ ಸಂಬಂಧಿಸಿದ ಉಪವಿಧಿಗಳಿದ್ದುವು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ