ಎಸ್. ವಿ. ರಾಜೇಂದ್ರಸಿಂಗ್ ಬಾಬು

ಚಲನಚಿತ್ರ ನಿರ್ದೇಶಕ

ಎಸ್. ವಿ. ರಾಜೇಂದ್ರಸಿಂಗ್ ಬಾಬು (ಅಕ್ಟೋಬರ್ ೨೨, ೧೯೫೨) ಪ್ರಸಿದ್ಧ ಚಲನಚಿತ್ರ ನಿರ್ದೇಶಕ ನಿರ್ಮಾಪಕರಲ್ಲೊಬ್ಬರು. ತಮ್ಮ ತಂದೆ ಪ್ರಸಿದ್ಧ ನಿರ್ಮಾಪಕ ಡಿ. ಶಂಕರಸಿಂಗ್ ಅವರು ಸ್ಥಾಪಿಸಿದ 'ಮಹಾತ್ಮ ಪಿಕ್ಚರ್ಸ್' ಸಂಸ್ಥೆಯನ್ನು ಮುಂದುವರೆಸಿದ ಅವರು ಕನ್ನಡವೇ ಅಲ್ಲದೆ ಹಲವಾರು ಹಿಂದಿ ಮತ್ತು ತೆಲುಗು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ತಮ್ಮ 'ಮುತ್ತಿನಹಾರ'ದಂತಹ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಯಲ್ಲೂ, ಹಲವಾರು ಚಿತ್ರಗಳಿಗೆ ರಾಜ್ಯಪ್ರಶಸ್ತಿಯಲ್ಲೂ ಹೆಸರು ಮಾಡಿದ್ದಾರೆ.

ಎಸ್. ವಿ. ರಾಜೇಂದ್ರಸಿಂಗ್ ಬಾಬು
ಜನನಅಕ್ಟೋಬರ್ ೨೨, ೧೯೫೨
ಮೈಸೂರು
Known forಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು

ಜೀವನ

ಅಕ್ಟೋಬರ್ ೨೨, ೧೯೫೨ ಕನ್ನಡ ಚಲನಚಿತ್ರ ರಂಗದ ಪ್ರಸಿದ್ಧ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರ ಜನ್ಮ ದಿನ.

ಮಹಾತ್ಮ ಪಿಕ್ಚರ್ಸ್

ರಾಜೇಂದ್ರಸಿಂಗ್ ಬಾಬು ಅವರನ್ನು ನೆನೆಯುವಾಗ ಅವರ ತಂದೆಯವರಾದ ಎಸ್. ವಿ. ಶಂಕರಸಿಂಗ್, ಮತ್ತು ಶಂಕರ್ ಸಿಂಗ್ ಅವರ ಗೆಳೆಯ ಬಿ. ವಿಠ್ಠಲಾಚಾರ್ಯ ಅವರು ಸ್ಥಾಪಿಸಿದ ಪ್ರಸಿದ್ಧ ಸಂಸ್ಥೆ ‘ಮಹಾತ್ಮ ಪಿಕ್ಚರ್ಸ್’ ಅನ್ನು ನೆನೆಯಲೇಬೇಕು. ೧೯೪೬ರಲ್ಲಿ ಪ್ರಾರಂಭವಾದ ಈ ಸಂಸ್ಥೆ ವಜ್ರಮಹೋತ್ಸವವನ್ನೂ ದಾಟಿ ರಾಜೇಂದ್ರಸಿಂಗ್ ಬಾಬು ಅವರ ನಾಯಕತ್ವದಲ್ಲಿ ಇಂದೂ ಮುನ್ನಡೆದು ನೂರಕ್ಕೆ ಸಮೀಪದ ಸಂಖ್ಯೆಯಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದೆ. ಡಾ. ರಾಜಕುಮಾರ್ ಸಹಾ ಬೇಡರ ಕಣ್ಣಪ್ಪಗಿಂತ ಮುಂಚಿಂತವಾಗಿಯೇ ಮಹಾತ್ಮ ಪಿಕ್ಚರ್ಸ್ ಅವರ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. ೧೯೪೭ರಲ್ಲಿ ‘ಕೃಷ್ಣ ಲೀಲ’ ಚಿತ್ರದಿಂದ ಪ್ರಾರಂಭಗೊಂಡಂತೆ, ಈ ಸಂಸ್ಥೆ ಸತತವಾಗಿ ಚಲನಚಿತ್ರಗಳನ್ನು ನೀಡುತ್ತಲೇ ಬಂದಿದೆ. ರಾಜ್ ಸಹೋದರ ವರದರಾಜ್, ಗಾಯಕ ಪಿ. ಕಾಳಿಂಗ ರಾವ್, ಹಾಸ್ಯ ನಟ ಬಾಲಕೃಷ್ಣ, ದಕ್ಷಿಣ ಭಾರತದ ಹೆಸರಾಂತ ನಾಯಕ ನಟ ಅರ್ಜುನ್ ಸರ್ಜಾ, ಜನಪ್ರಿಯ ಸಂಗೀತ ಜೋಡಿ ರಾಜನ್ ನಾಗೇಂದ್ರ, ಸಾಹಿತಿ ಹುಣಸೂರು ಕೃಷ್ಣಮೂರ್ತಿ ಇವರೆಲ್ಲ ಮಹಾತ್ಮ ಪಿಕ್ಚರ್ಸ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆಗಳು. ಈ ಸಂಸ್ಥೆ ಅಂದು ನಿರ್ಮಿಸಿದ ‘ಜಗನ್ಮೋಹಿನಿ’ ಚಿತ್ರ ಕನ್ನಡದಲ್ಲಿ ಶತದಿನೋತ್ಸವ ಕಂಡ ಪ್ರಪ್ರಥಮ ಚಲನಚಿತ್ರ. ‘ಜಗನ್ಮೋಹಿನಿ’, ‘ನಾಗಕನ್ನಿಕಾ’ದಂತಹ ಕನ್ನಡ ಚಿತ್ರಗಳು ತಾಂತ್ರಿಕತೆಯ ಶ್ರೀಮಂತಿಕೆಯಲ್ಲಿ ಇತರ ಭಾಷೆಯ ಸಿನಿಮಾಗಳನ್ನು ಸರಿಗಟ್ಟುವಲ್ಲಿ ಮತ್ತು ಆ ಭಾಷೆಯ ಸಿನಿಮಾಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.

ಶಂಕರ ಸಿಂಗ್ ಅವರು ಎಷ್ಟರಮಟ್ಟಿಗಿನ ಕನ್ನಡ ಅಭಿಮಾನಿಗಳಾಗಿದ್ದರೆಂದರೆ ಇತರ ರಾಜ್ಯಗಳಲ್ಲಿ ಎಲ್ಲ ತರದ ಉತ್ತಮ ಸೌಲಭ್ಯಗಳು ಸಿಕ್ಕರೂ ಕನ್ನಡ ನಾಡಿನಲ್ಲೇ ಚಿತ್ರಣ ಮಾಡಬೇಕೆಂಬ ಛಲ ಹೊತ್ತವರು. ಅವರ ಚಿತ್ರಗಳೆಲ್ಲ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲೇ ನಿರ್ಮಿತವಾದವು. ಅವರ ಈ ಸಾಧನೆಯ ದೆಸೆಯಿಂದ ಕನ್ನಡ ಚಿತ್ರಗಳಿಗೆ ಸಬ್ಸಿಡಿ ದೊರೆಯುವಂತಾಯಿತು. ಊಟಿ, ಚಿಕ್ಕಮಗಳೂರು, ಮೇಕೆ ದಾಟುಗಳನ್ನು ಚಿತ್ರೀಕರಣಕ್ಕೆ ಉಪಯೋಗಿಸಲು ಪ್ರಥಮವಾಗಿ ಪ್ರಾರಭಮಾಡಿದವರೂ ಶಂಕರಸಿಂಗ್ ಅವರೆ! ಶಂಕರ ಸಿಂಗ್ ಅವರ ಪತ್ನಿ ಪ್ರತಿಮಾ ದೇವಿ ಅವರು, ಅಂದಿನ ದಿನದ ಸೌಂದರ್ಯ ಮತ್ತು ಪ್ರತಿಭೆಗಳು ಮೇಳೈಸಿದ ಪ್ರಸಿದ್ಧ ಚಲನಚಿತ್ರ ತಾರೆ.

ಎಸ್. ವಿ. ರಾಜೇಂದ್ರಸಿಂಗ್ ಬಾಬು ತಮ್ಮ ತಾಯಿ ಪ್ರತಿಮಾ ದೇವಿ ಮತ್ತು ಸಹೋದರಿ ವಿಜಯಲಕ್ಷ್ಮಿಸಿಂಗ್ ಅವರು ರಾಜೇಂದ್ರಸಿಂಗ್ ಬಾಬು ಅವರ ಜೊತೆ ಮಹಾತ್ಮ ಲಾಂಛನದ ದೀಪವನ್ನು ಬೆಳಗಿಸುವ ಕಾರ್ಯದಲ್ಲಿ ನಿರಂತರವಾಗಿ ಅವರ ಜೊತೆಗಿದ್ದಾರೆ. ಅವರ ಸಹೋದರ ಸಂಗ್ರಾಮ್ ಸಿಂಗ್ ಅವರು ಕೂಡಾ ಹಲವು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.

ಛಾಯಾಗ್ರಾಹಕ ಬರಹಗಾರ

ಹೀಗೆ ಸಿನಿಮಾ ವಾತಾವರಣದಲ್ಲಿ ಬೆಳೆದ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಮುಂದೆ ಸಿನಿಮಾ ನಿರ್ಮಾಣ, ನಿರ್ದೇಶನಗಳ ಮೂಲಕ ತಂದೆಯವರ ಕಾಯಕವನ್ನು ಸಮರ್ಥವಾಗಿ ಮುಂದುವರೆಸಿದರು. ಮನೆಯವರಿಗೆ ಹುಡುಗ ಡಾಕ್ಟರ್ ಆಗಲಿ ಎಂಬ ಆಶಯವಿದ್ದರೂ ವಂಶದಲ್ಲಿದ್ದ ಕಲೆಯವಾಹಿನಿ ಬಾಬು ಅವರನ್ನು ಅತ್ತಲೇ ಸೆಳೆದಿತ್ತು. ಯಾರೂ ಕಾಣದಿದ್ದ ಅಜ್ಞಾತ ಸ್ಥಳಗಳಿಗೆ ಕ್ಯಾಮೆರಾ ಹೊತ್ತು ತಿರುಗುತ್ತಿದ್ದ ಬಾಬು ಸುಧಾ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಹಲವಾರು ಸುಂದರ ಸಚಿತ್ರ ಲೇಖನಗಳನ್ನು ಬರೆಯುತ್ತಿದ್ದರು. ಈ ಕಲಾತ್ಮಕ ಚಿಂತನೆಗಳೇ ಕ್ರಮೇಣವಾಗಿ ಅವರನ್ನು ಚಿತ್ರರಂಗದ ಕಾಯಕದಲ್ಲೂ ತೊಡಗಿಸಿದವು.

ಚಲನಚಿತ್ರ ಲೋಕದಲ್ಲಿ

ತಮ್ಮ ತಂದೆಯವರೊಂದಿಗೆ ‘ನಾಗಕನ್ಯೆ’ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಬಾಬು ಮುಂದೆ ‘ನಾಗರ ಹೊಳೆ’, ‘ಕಿಲಾಡಿ ಜೋಡಿ’, ‘ಬಂಧನ’, ‘ಅಂತ’, ‘ಭರ್ಜರಿ ಭೇಟೆ’, ‘ಮುತ್ತಿನ ಹಾರ’, ‘ಮುಂಗಾರಿನ ಮಿಂಚು’, ‘ಸಿಂಹದ ಮರಿ ಸೈನ್ಯ’, ‘ಹೂವು ಹಣ್ಣು’, ‘ಹಿಮ ಪಾತ’, ‘ಮಹಾ ಕ್ಷತ್ರಿಯ’, ‘ಹಿಮಪಾತ’ ಮುಂತಾದ ಭರ್ಜರಿ ಚಿತ್ರಗಳನ್ನು ಕನ್ನಡದಲ್ಲಿ ನಿರ್ಮಿಸಿ ನಿರ್ದೇಶಿಸಿದರು. ಅದರಲ್ಲೂ ‘ನಾಗರಹೊಳೆ’ಯಲ್ಲಿ ಮಕ್ಕಳೊಡನೆ ಪ್ರಾಣಿ ಪರಿಸರಗಳನ್ನು ಮೂಡಿಸಿದ ಬಗೆ, ‘ಬಂಧನ’ ಚಿತ್ರದಲ್ಲಿ ಅವರು ನಿರೂಪಿಸಿದ ವಿಷ್ಣುವರ್ಧನ – ಸುಹಾಸಿನಿ ಜೋಡಿಯ ಪಾತ್ರಗಳು, ಅಂತ ಚಿತ್ರದಲ್ಲಿ ಅಂಬರೀಶ್ ಅವರನ್ನು ಕನ್ವರ್ ಆಗಿಸಿದ ರೀತಿ ಕನ್ನಡ ಜನತೆ ಮರೆಯುವಂತೆಯೇ ಇಲ್ಲ. ‘ಮುತ್ತಿನಹಾರ’ದಂತಹ ಚಿತ್ರಗಳು ಯಶಸ್ವಿಯಾಗದಿದ್ದರೂ ಅವರನ್ನು ಕಲಾತ್ಮಕ ಚಿತ್ರಗಳ ರಾಷ್ಟ್ರೀಯ ಪ್ರಶಸ್ತಿ ಪಡೆಯುವವರ ಸಾಲಿನಲ್ಲಿ ಬೆಳಗಿಸಿತು. ‘ಮುಂಗಾರಿನ ಮಿಂಚು’ವಿನ ಅವರ ಮಿಂಚಿನ ಪ್ರತಿಭೆಯೂ ಮೆಲುಕು ಹಾಕುವಂತದ್ದು. ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ದೊರೈ-ಭಗವಾನ್ ಅವರಂತೆ, ಕನ್ನಡದ ಪ್ರಸಿದ್ಧ ಕಾದಂಬರಿಗಳನ್ನು ಸುಂದರ ಚಲನಚಿತ್ರಗಳಾಗಿ ಮಾರ್ಪಡಿಸಿದ ರಾಜೇಂದ್ರ ಸಿಂಗ್ ಬಾಬು ಅವರ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲೂ ಸೋಲು ಗೆಲುವುಗಳ ಮಿಶ್ರ ಫಲದ ಅನುಭವದೊಂದಿಗೆ ಹಲವು ನಿರ್ಮಾಣ-ನಿರ್ದೇಶನಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಸುಮಾರು ೩೫ ಚಿತ್ರಗಳು, ಹಿಂದಿಯಲ್ಲಿ ೮, ತೆಲುಗಿನಲ್ಲಿ ೭ ಚಿತ್ರಗಳನ್ನು ಬಾಬು ಮಾಡಿದ್ದಾರೆ.

ಸೋಲು ಗೆಲುವುಗಳ ನಡುವೆ

ದುರದೃಷ್ಟವಶಾತ್ ಸಿನಿಮಾರಂಗ ಯಶಸ್ಸನ್ನು ಓಲೈಸುವಷ್ಟು ಸೋಲನ್ನು ಸಹನೀಯವಾಗಿರಿಸುವುದಿಲ್ಲ! ಈ ಗಾಳಿಗೆ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ಕೂಡ ಹೊರತಾಗಲಿಲ್ಲ. ಅವರ ‘ಮುತ್ತಿನಹಾರ’ದಂತ ಅದ್ಧೂರಿ ಚಿತ್ರ ಕೂಡ ಮಾರುಕಟ್ಟೆಯಲ್ಲಿ ಅಪಾರ ಸೋಲು ಅನುಭವಿಸಿತು. ಇದೇ ಜಾಡಿನಲ್ಲಿ ಅವರ ಮತ್ತಷ್ಟು ಚಿತ್ರಗಳು ನಡೆದು ಅವರನ್ನು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಗಳಿಗೆ ನೂಕುವಂತೆ ಮಾಡಿದವು. ಅವರ ಮಗ ಆದಿತ್ಯನನ್ನು ಚಲನಚಿತ್ರರಂಗದಲ್ಲಿ ನಾಯಕನಟನಾಗಿ ಸ್ಥಾಪಿಸುವ ಅವರ ಅಭೀಷ್ಟೆಗಳು ಕೂಡ ಪೂರೈಸಲಿಲ್ಲ. ಇಷ್ಟಾದರೂ ಎದೆಗುಂದದೆ ಆಗಾಗ್ಗೆ ಉತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ. ಪೌರಾಣಿಕ ಚಿತ್ರಗಳನ್ನು ಹೊರತುಪಡಿಸಿದರೆ ಎಸ್.ವಿ.ರಾಜೇಂದ್ರಸಿಂಗ್ ಬಾಬು ಎಲ್ಲ ಶೈಲಿಯ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ ಎಂದು ಹೇಳಬಹುದು. ಬಾಂಡ್ ಶೈಲಿಯ ಚಿತ್ರ, ಮಕ್ಕಳ ಚಿತ್ರ, ಸಾಂಸಾರಿಕ ಚಿತ್ರಗಳಲ್ಲಿ ಕೈಯಾಡಿಸಿರುವ ಸಿಂಗ್ ಬಾಬು ತಾನು ಹಾಸ್ಯ ಚಿತ್ರಗಳನ್ನೂ ನಿರ್ದೇಶಿಸಬಲ್ಲೆ ಎಂದು ಸಾಬೀತುಪಡಿಸಿದ್ದಾರೆ. ‘ಕುರಿಗಳು ಸಾರ್ ಕುರಿಗಳು’, ‘ಕೋತಿಗಳು ಸಾರ್ ಕೋತಿಗಳು’, ‘ಕತ್ತೆಗಳು ಸಾರ್ ಕತ್ತೆ’ಗಳು ಚಿತ್ರದ ಮೂಲಕ ಅವರಲ್ಲಿನ ಹಾಸ್ಯ ನಿರ್ದೇಶಕ ಹೊರಬಿದ್ದಿದ್ದ. ಈ ಚಿತ್ರಗಳಲ್ಲಿ ರಮೇಶ್, ಎಸ್.ನಾರಾಯಣ್, ಮೋಹನ್, ಕೋಮಲ್‌ಕುಮಾರ್ ಮೊದಲಾದ ಕಲಾವಿದರ ಪ್ರತಿಭೆಯನ್ನು ಬಾಬು ಸಮರ್ಥವಾಗಿ ಬಳಸಿಕೊಂಡಿದ್ದರು. ವಿವಿಧ ರೀತಿಯ ಚಿತ್ರಕತೆಗಳನ್ನು ಹೆಕ್ಕಿ ಹೊರತೆಗೆದು ಅದನ್ನು ಶ್ರೀಮಂತವಾಗಿ ಹೊಸರೀತಿಯಲ್ಲಿ ಮೂಡಿಸಲೆತ್ನಿಸುವ ಅವರ ಪರಿಶ್ರಮ ಚಿತ್ರರಂಗದಲ್ಲಿ ಅಪೂರೂಪವೆನಿಸುವಂತದ್ದು.

ಚಲನಚಿತ್ರಗಳು

ವರ್ಷಚಿತ್ರವಿವರಭಾಷೆ
ನಿರ್ದೇಶನಚಿತ್ರಕಥೆನಿರ್ಮಾಣ
1975ನಾಗಕನ್ಯೆ Y Y Yಕನ್ನಡ
1977ನಾಗರಹೊಳೆ Y Y Nಕನ್ನಡ
1978ಕಿಲಾಡಿ ಜೋಡಿ Y Y Nಕನ್ನಡ
1981ಭಾರಿ ಭರ್ಜರಿ ಬೇಟೆ Y Y Nಕನ್ನಡ
1981ಅಂತ Y Y Nಕನ್ನಡ
1981ಸಿಂಹದ ಮರಿ ಸೈನ್ಯ Y Y Nಕನ್ನಡ
1981ಮೇರಿ ಆವಾಜ್ ಸುನೋ Y Y Nಹಿಂದಿ
1982ತಿರುಗುಬಾಣ N N Yಕನ್ನಡ
1982ಟೋನಿ N N Yಕನ್ನಡ
1984ಕಲಿಯುಗ N N Yಕನ್ನಡ
1984ಗಂಡಭೇರುಂಡ Y Y Nಕನ್ನಡ
1984ಬಂಧನ Y Y Yಕನ್ನಡ
1984ಮೇರಾ ಫೈಸಲಾ Y Y Nಹಿಂದಿ
1984ಶರಾರಾ Y Y Nಹಿಂದಿ
1985ಪಿತಾಮಹ N N Yಕನ್ನಡ
1985ಏಕ್ ಸೇ ಭಲೇ ದೋ Y Y Nಹಿಂದಿ
1985ಬ್ರಹ್ಮ ವಿಷ್ಣು ಮಹೇಶ್ವರ N N Yಕನ್ನಡ
1986ಕರ್ಣ N N Yಕನ್ನಡ
1986ಕೃಷ್ಣ ನೀ ಬೇಗನೆ ಬಾರೋ N N Yಕನ್ನಡ
1986ಮನೆಯೇ ಮಂತ್ರಾಲಯ N N Yಕನ್ನಡ
1987ಕುರುಕ್ಷೇತ್ರ N N Yಕನ್ನಡ
1987ಯುಗಪುರುಷ N N Yಕನ್ನಡ
1990ಬಣ್ಣದ ಗೆಜ್ಜೆ Y Y Nಕನ್ನಡ
1990ಪ್ರೇಮ ಯುದ್ಧಂ Y Y Nತೆಲುಗು
1990ಮುತ್ತಿನ ಹಾರ Y Y Yಕನ್ನಡ
1990ಆಗ್ ಕಾ ದರ್ಯಾ Y Y Nಹಿಂದಿ
1990ಶ್ರೀ ಸತ್ಯನಾರಾಯಣ ಪೂಜಾಫಲ N N Yಕನ್ನಡ
1992ಮಲ್ಲಿಗೆ ಹೂವೇ N N Yಕನ್ನಡ
1993ಹೂವು ಹಣ್ಣು Y Y Yಕನ್ನಡ
1994ಮಹಾಕ್ಷತ್ರಿಯ Y Y Nಕನ್ನಡ
1995ಹಿಮಪಾತ Y Y Nಕನ್ನಡ
1995ಕಲ್ಯಾಣೋತ್ಸವ Y Y Nಕನ್ನಡ
1997ಮುಂಗಾರಿನ ಮಿಂಚು Y Y Yಕನ್ನಡ
1998ದೋಣಿ ಸಾಗಲಿ Y Y Nಕನ್ನಡ
1998ಭೂಮಿ ತಾಯಿಯ ಚೊಚ್ಚಲ ಮಗ Y Y Yಕನ್ನಡ
2000ಮೆಕ್ಯಾನಿಕ್ ಮಾಮಯ್ಯ Y Y Yತೆಲುಗು
2001ಕುರಿಗಳು ಸಾರ್ ಕುರಿಗಳು Y Y Yಕನ್ನಡ
2002ಕೋತಿಗಳು ಸಾರ್ ಕೋತಿಗಳು Y Y Yಕನ್ನಡ
2003ಕತ್ತೆಗಳು ಸಾರ್ ಕತ್ತೆಗಳು Y Y Yಕನ್ನಡ
2004ಲವ್ Y Y Yಕನ್ನಡ
2004ಕಾಂಚನಗಂಗಾ Y Y Nಕನ್ನಡ
2006ಮೋಹಿನಿ 9886788888 Y Y Yಕನ್ನಡ
2008ಬುದ್ಧಿವಂತ N N Yಕನ್ನಡ
2010ತಿಪ್ಪಾರಳ್ಳಿಯ ತರ್ಲೆಗಳು Y Y Nಕನ್ನಡ
2011ಲವ್ ಇನ್ ಕಾಶ್ಮೀರ್ Y Y Nಹಿಂದಿ
2015ರೆಬೆಲ್ Y Y Nಕನ್ನಡ
2018ರಕ್ತಾಕ್ಷ [lower-alpha ೧] Y N Nಕನ್ನಡ
2020ರಾಜವೀರ ಮದಕರಿನಾಯಕ [lower-alpha ೨] Y N Nಕನ್ನಡ

ಬರಹ

ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡದ ಶ್ರೇಷ್ಠ ನಟ ವಿಷ್ಣುವರ್ಧನ್ ಅವರ ನೆನಪಿಗಾಗಿ "ನೆನಪಿನ ಮುತ್ತಿನ ಹಾರ" ಎಂಬ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕವು ವಿಷ್ಣುವರ್ಧನ್ ಅವರಿಗೆ ಗೌರವವಾಗಿದೆ, ಅಲ್ಲಿ ಬಾಬು ಅವರು ವಿಷ್ಣುವರ್ಧನ್ ಅವರೊಂದಿಗೆ ತಮ್ಮ ಹಲವಾರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಾಬು ಅವರು ವಿಷ್ಣುವರ್ಧನ್ ಅವರೊಂದಿಗೆ ಹೊಂದಿದ್ದ ವಿಶೇಷ ಬಂಧವನ್ನು ಪುಸ್ತಕ ಬಹಿರಂಗಪಡಿಸುತ್ತದೆ. ಅರ್ಥಪೂರ್ಣ ಸಿನಿಮಾದಲ್ಲಿ ಕೆಲಸ ಮಾಡಲು, ಪ್ರಭಾವ ಬೀರಲು ಬಯಸುತ್ತಿರುವ ಬಾಬು ಅವರ ನಿರಂತರ ಉತ್ಸಾಹವನ್ನು ಪುಸ್ತಕವು ಬಹಿರಂಗಪಡಿಸುತ್ತದೆ. ವಿಷ್ಣುವರ್ಧನ್ ಮತ್ತು ಡಾ. ರಾಜ್‌ಕುಮಾರ್ ಅವರನ್ನು ಒಳಗೊಂಡ ಚಿತ್ರಮಂದಿರಗಳನ್ನು ನಿರ್ಮಿಸುವ ಅವರ ಅಂತ್ಯವಿಲ್ಲದ ಕನಸುಗಳು ಮತ್ತು ಆ ಚಿತ್ರಗಳು ಎಷ್ಟು ಶ್ರೇಷ್ಠವಾಗಿದ್ದಿರಬಹುದು ಮತ್ತು ಅದು ಕನ್ನಡ ಚಿತ್ರರಂಗಕ್ಕೆ ಹೇಗೆ ಕೊಡುಗೆ ನೀಡುತ್ತಿತ್ತು ಎಂಬುದನ್ನು ತಿಳಿಸುತ್ತದೆ.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ